ಬೆಂಗಳೂರು: ಅಪ್ಪುಗೆ 'ಕರ್ನಾಟಕ ರತ್ನ' ಸಿಕ್ಕಿದ್ರೆ ಅಂಬರೀಶ್ಗೂ ಸಿಕ್ಕಿದಂಗೆ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಭೇದಭಾವ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.
ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಖ್ಯಾತಿಯ ಅಂಬರೀಶ್ ನಿಧನರಾಗಿ ಇಂದಿಗೆ 3 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಸೇರಿ ಚಿತ್ರರಂಗದ ಹಲವು ಗಣ್ಯರು ಪೂಜೆ ಸಲ್ಲಿಸಿದರು.
ಈ ವೇಳೆ ಅಂಬರೀಶ್ಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವ ವಿಚಾರವಾಗಿ ಮಾತನಾಡಿದ ಸಂಸದೆ, ಪುನೀತ್ಗೆ ಸಿಕ್ಕ ಗೌರವ ಅಂಬರೀಶ್ ಅವ್ರಿಗೂ ಸಿಗುತ್ತೆ, ನನಗೆ ನಂಬಿಕೆ ಇದೆ ಎಂದು ಹೇಳಿದರು. ಅಪ್ಪುಗೆ 'ಕರ್ನಾಟಕ ರತ್ನ' ಸಿಕ್ಕಿದ್ರೆ ಅಂಬರೀಶ್ಗೂ ಸಿಕ್ಕಂತೆಯೇ. ಅಂಬರೀಶ್ ಅವರಿಗೆ ಏನು ಗೌರವ ಸಿಗಬೇಕಿತ್ತೋ ಅದು ಸಿಕ್ಕೇ ಸಿಕ್ಕುತ್ತೆ ಎಂಬ ಭರವಸೆ ಇದೆ. ಅದು ಆಗಲೇ ಸಿಕ್ಕಿದೆ. ಅದು ಜನರ ಪ್ರೀತಿ, ಅದೇ ದೊಡ್ಡ ಪ್ರಶಸ್ತಿ. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್ಗೂ ಸಿಕ್ಕಿದಂಗೆ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಭೇದಭಾವ ಇಲ್ಲ. ಒಂದು ವೇಳೆ ಅಂಬರೀಶ್ ಈಗ ಇದ್ದಿದ್ರೆ ಅವ್ರಿಗೆ ಸಿಗೋದ್ಕಿಂತ 'ಅಪ್ಪು'ಗೆ ಪ್ರಶಸ್ತಿ ಕೊಟ್ಟಿರೋದಕ್ಕೆ ಅವರು ಹೆಮ್ಮೆ ಪಡ್ತಿದ್ರು, ಸಂತೋಷ ಪಡ್ತಿದ್ರು ಎಂದು ಸುಮಲತಾ ಅಂಬರೀಶ್ ಹೇಳಿದರು. ಅಭಿಮಾನಿಗಳು ಕೂಡ ಇದೇ ರೀತಿಯ ಭಾವನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ: ದರ್ಶನ್ ಟ್ವೀಟ್
ಸದ್ಯದಲ್ಲೇ ಅಂಬರೀಶ್ ಸ್ಮಾರಕ ನಿರ್ಮಾಣ:
ಅಂಬರೀಶ್ ಸ್ಮಾರಕ ನಿರ್ಮಾಣದ ವಿಚಾರವಾಗಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ 4 ಕೋಟಿ 75 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸ್ಮಾರಕದ ಕೆಲಸಗಳು ಸದ್ಯದಲ್ಲೇ ಶುರುವಾಗಲಿದೆ. ಆದಷ್ಟು ಬೇಗ ಅಂಬರೀಶ್ ಸ್ಮಾರಕದ ಕೆಲಸಗಳನ್ನು ಪೂರ್ಣಗೊಳಿಸಿ ಬಹುಬೇಗನೆ ನಮ್ಮ ಸರ್ಕಾರದ ಮುಖ್ಯಮಂತ್ರಿಗಳು ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.