ಬೆಂಗಳೂರು : ಎಲ್ಲೆಡೆ ಕಾಂಕ್ರೀಟ್ ಕಾಡು ಬೆಳೆಯುತ್ತಿವೆ. ನಗರಾಭಿವೃದ್ಧಿಗೆ ಮುಂದಾಗಿರುವ ಮಾನವ ನೀರಿನ ಮೂಲಗಳನ್ನು ಸಹ ಆಕ್ರಮಣ ಮಾಡುತ್ತಿದ್ದಾನೆ.
ಆದ್ರೆ, ಇಲ್ಲೊಬ್ಬ ವಿದ್ಯಾರ್ಥಿನಿ ಹಾಳು ಬಿದ್ದಿದ್ದ ಕೆರೆಗೆ ಮರು ಜೀವ (student took step to develop lake) ನೀಡುವ ಮೂಲಕ ಯುವಪೀಳಿಗೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾಳೆ.
ಹೆಸರು ರಚನಾ, 11ನೇ ತರಗತಿ ವಿದ್ಯಾರ್ಥಿನಿ. ಇಂತಹ ಚಿಕ್ಕವಯಸ್ಸಿನಲ್ಲಿಯೇ ಎಲ್ಲರೂ ಮೆಚ್ಚುವಂತಹ ಕಾರ್ಯ ಮಾಡಿದ್ದಾಳೆ. ಕಾಲೇಜಿನ ಪ್ರಾಜೆಕ್ಟ್‌ಗಾಗಿ ಹೂಳು ತುಂಬಿ ಪಾಳು ಬಿದ್ದಿದ್ದ ಕೆರೆಯ ಸ್ವರೂಪವನ್ನೇ ಬದಲಾಯಿಸಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನ ಸಾರಿದ್ದಾಳೆ.
ಕಾಲೇಜಿನ ಪ್ರಾಜೆಕ್ಟ್‌ಗಾಗಿ ರಚನಾ ಸರ್ಜಾಪುರದ ಕೊಮ್ಮಸಂದ್ರ ಕೆರೆಯನ್ನ (kommasandra lake in bangalore ) ಆಯ್ಕೆ ಮಾಡಿಕೊಂಡಿದ್ದಳು. ತಾಯಿ ಗೀತಾ ಅವರ ಬೆಂಬಲದೊಂದಿಗೆ ತಮ್ಮದೆಯಾದ ಸ್ವಂತ ಕಂಪನಿ ರತ್ನ ಪ್ಯಾಕೇಜಿಂಗ್ ಹಾಗೂ ಗೆಳೆಯರ ಕಂಪನಿಯಾದ ಮೈಕ್ರೋಪ್ಯಾಕ್ ಪ್ರೈ. ಲಿ. ನಿಂದ 39 ಲಕ್ಷ ರೂಪಾಯಿ ಅನುದಾನ ಒಟ್ಟು ಮಾಡಿ ಕೆರೆ ಅಭಿವೃದ್ಧಿ ಮಾಡಿದ್ದಾರೆ.
ಅಲ್ಲದೆ, ಕೆರೆ ಸಂರಕ್ಷಣೆಗೆ ಹೆಸರುವಾಸಿಯಾದ ಆನಂದ್ ಮಲ್ಲಿಕಗವಾಡ ಅವರ ಸಹಕಾರದೊಂದಿಗೆ, ಕೇವಲ 37 ದಿನಗಳಲ್ಲಿ 12 ಎಕರೆಯ ಕೆರೆಯ ಹೂಳು ತೆಗೆದು ಬದು ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಮರಗಳಿಗೆ ಹಾನಿಯಾಗದಂತೆ ದ್ವೀಪದಂತೆ ಚೌಕಟ್ಟು ನಿರ್ಮಿಸಿದ್ದಾರೆ. ಕೆರೆಗೆ ನೇರವಾಗಿ ಚರಂಡಿ ನೀರು ಸೇರಿದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕೆರೆ ಅಭಿವೃದ್ಧಿ ಮಾಡಲು ಅನುಮತಿ ಪಡೆಯಲು ಕೊಮ್ಮಸಂದ್ರ ಹಳ್ಳಿಯ 450 ಮನೆಗಳಿಗೂ ಭೇಟಿ ಕೊಟ್ಟು ಸಹಕಾರ ಪಡೆದಿದ್ದಾರೆ. ನಂತರ ಎರಡೂವರೇ ಎಕರೆಯಷ್ಟು ಭೂಮಿಯನ್ನು ಒತ್ತುವರಿ ತೆರವು ಮಾಡಿದ್ದಾರೆ.
ಸರ್ಕಾರದ ಸಹಾಯವಿಲ್ಲದೆ ವಿದ್ಯಾರ್ಥಿನಿ ಹಾಗೂ ಕಂಪನಿಗಳ ಫಂಡ್‌ನಿಂದ ಅತ್ಯಂತ ಕಡಿಮೆ ಸಮಯದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಕೆರೆಯಲ್ಲಿ ನೀರು ತುಂಬುವ ಸಾಮರ್ಥ್ಯ ದುಪ್ಪಟ್ಟಾಗಲಿದೆ.
ಕೆರೆ ಅಭಿವೃದ್ಧಿ ಹಿಂದಿನ ಶ್ರಮದ ಕುರಿತು ಮಾತನಾಡಿದ ವಿದ್ಯಾರ್ಥಿನಿ, ರಚನಾ ಪ್ರಾಜೆಕ್ಟ್‌ಗಾಗಿ ಈ ಕೆರೆ ಅಭಿವೃದ್ಧಿ ವಿಷಯ ಕೈಗೆತ್ತಿಕೊಂಡೆವು. ಇವತ್ತಿಗೆ ಯಶಸ್ವಿಯಾಗಿ ಅಭಿವೃದ್ಧಿ ಮಾಡಲಾಗಿದೆ. ಪ್ರತಿ ಮನೆ ಮನೆಗೂ ಭೇಟಿ ಕೊಟ್ಟು ಜನರ ಸಹಕಾರ ಕೇಳಿ, ಪೂಜೆ ದಿನದಂದು ಎಲ್ಲರೂ ಬಂದು ಕೆಲಸ ಆರಂಭಿಸಲಾಯಿತು. ಈ ಕೆಲಸ ನನ್ನಿಂದ ಸಾಧ್ಯವಾಯಿತು ಅಂದ್ರೆ ಎಲ್ಲರಿಂದಲೂ ಮಾಡಲು ಸಾಧ್ಯ. ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ರಚನಾ ತಾಯಿ ಗೀತ ಅವರು ಮಾತನಾಡಿ, ಆನಂದ್ ಅವರ ಬಗ್ಗೆ ಈನಾಡು ಪತ್ರಿಕೆಯಲ್ಲಿ ಓದಿ ವಿಷಯ ತಿಳಿಯಿತು. ಕೆರೆ ಅಭಿವೃದ್ಧಿಗೆ ಸಲಹೆ, ಸಹಕಾರವನ್ನು ಆನಂದ್ ಅವರಿಂದ ಪಡೆಯಲಾಯಿತು. ಫಂಡ್ ಸಿಕ್ಕರೆ ಇನ್ನಷ್ಟು ಕೆರೆ ಅಭಿವೃದ್ಧಿ ಪಡಿಸಲು ಸಿದ್ಧ ಎಂದು ಉತ್ಸಾಹ ತೋರಿಸಿದರು.
ಆನಂದ್ ಮಲ್ಲಿಗವಾಡ ಅವರು ಮಾತನಾಡಿ, ಈವರೆಗೆ 18 ಕೆರೆಗಳ ಸುಮಾರು 392 ಎಕರೆ ಕೆರೆ ಜಾಗ ಅಭಿವೃದ್ಧಿಪಡಿಸಲಾಗಿದೆ. ಕೊಮ್ಮಸಂದ್ರ ಕೆರೆಯನ್ನು ವಿದ್ಯಾರ್ಥಿನಿ ಮುಂದೆ ಬಂದು ಅಭಿವೃದ್ಧಿಪಡಿಸಿರುವುದು ಯುವ ಸಮುದಾಯಕ್ಕೆ ಮಾದರಿ ಕೆಲಸ. ಈ ಕೆರೆಗೆ ಕೆಸಿ ವ್ಯಾಲಿಯಿಂದ ಸಂಸ್ಕರಿಸಿದ ನೀರು ಹರಿದು ಬರುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆರೆ ಕೆಲಸಗಳು ಮುಗಿದ ಬಳಿಕ ಮತ್ತೆ ತುಂಬಿಸಲಾಗುತ್ತದೆ ಅಂತಾ ಹೇಳಿದರು.
ವಿದ್ಯಾರ್ಥಿನಿಯ ಮಾದರಿ ಕೆಲಸದಿಂದ ಪರಿಸರ ಸಂರಕ್ಷಣೆ ಆಗಿರುವುದಲ್ಲದೇ, ಇನ್ನಷ್ಟು ವಿದ್ಯಾರ್ಥಿಗಳು ಮನಸ್ಸು ಮಾಡಿದರೆ, ಸಾವಿರಾರು ದಾರಿಯಲ್ಲಿ ಪರಿಸರ ರಕ್ಷಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಚನಾ.