ಬೆಂಗಳೂರು: ಲಾಕ್ಡೌನ್ ಜಾರಿಯಾಗಿರುವ ಕಾರಣ ಈ ಬಾರಿ ಸಾರ್ವಜನಿಕರ ಸಂಚಾರಕ್ಕೆ ಪಾಸ್ ವ್ಯವಸ್ಥೆಯನ್ನು ಪೊಲೀಸರು ಮಾಡಿಲ್ಲ. ಅನಗತ್ಯವಾಗಿ ಓಡಾಡುವವರ ಮೇಲೆ ಖಾಕಿ ಕಣ್ಣಿಟ್ಟಿದ್ದು, ಭದ್ರತೆ ಪರಿಶೀಲನೆ ಶುರು ಮಾಡಿದ್ದಾರೆ.
ಮುಂಜಾನೆಯಿಂದ ಬಹುತೇಕ ಕಡೆ ಅಗತ್ಯ ಸೇವೆಗೆಂದು ಸಾರ್ವಜನಿಕರ ಓಡಾಟ ಹೆಚ್ಚಾಗಿತ್ತು. ಈ ವೇಳೆ ಪೊಲೀಸರು ಕೂಡ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಿದ್ದಾರೆ. ಕೆಲವೊಂದು ಕಡೆ ಅನಗತ್ಯ ಓಡಾಟ ಕಂಡು ಬಂದ ಕಾರಣ ಖುದ್ದಾಗಿ ಪೊಲೀಸರು ಅಖಾಡಕ್ಕೆ ಇಳಿದು ವಾಹನಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಹಿರಿಯ ಅಧಿಕಾರಿಗಳು ರೌಂಡ್ಸ್ ಶುರು ಮಾಡಿ ಸಿಬ್ಬಂದಿ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎನ್ನುವುದರ ಕುರಿತು ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಖುದ್ದಾಗಿ ಅಖಾಡಕ್ಕೆ ಇಳಿದು ವಾಹನಗಳ ಪರಿಶೀಲನೆ ಮಾಡಿದ್ದಾರೆ. ಮಧ್ಯಾಹ್ನ 12 ಗಂಟೆಯ ನಂತರ ವಿನಾ ಕಾರಣ ಓಡಾಟ ಮಾಡುವವರ ವಾಹನ ಜಪ್ತಿ ಮಾಡಿ ಎನ್ಡಿಎಂಎ ಆ್ಯಕ್ಟ್ ಅಡಿ ಪೊಲೀಸರು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರು ಎಂಟ್ರಿ ಪಾಯಿಂಟ್ ಆಗಿರುವ ಪೀಣ್ಯ ಎಂಟನೇ ಮೈಲಿ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಸದ್ಯ ಪ್ರತಿ ಚೆಕ್ ಪೋಸ್ಟ್ ಬಳಿ ಡಿಸಿಪಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.