ಬೆಂಗಳೂರು: ದಿನದ ಆದಾಯದ ಮೇಲೆ ತೀರಾ ಅವಲಂಬಿತರಾಗಿರುವ ಬೀದಿಬದಿ ವ್ಯಾಪಾರಿಗಳಿಗೆ ಕೊರೊನಾ ಎಂಬ ಹೆಮ್ಮಾರಿಯನ್ನು ಹೋಗಲಾಡಿಸಲು ಜಾರಿಯಾಗಿದ್ದ ಲಾಕ್ಡೌನ್ನಿಂದ ಬರೆ ಎಳೆದಂತಾಗಿದೆ. ಲಾಕ್ಡೌನ್ ಎಂಬ ಸಂಕಷ್ಟದ ದಿನಗಳು ಮುಗಿದು ಅನ್ಲಾಕ್ ಆದ್ರೂ ಗ್ರಾಹಕರು ಎಂದಿನಂತೆ ಖರೀದಿ ಮಾಡಲು ಬರುತ್ತಿಲ್ಲ. ಹೀಗಾಗಿಯೇ ವ್ಯಾಪಾರದಲ್ಲಿ ಕುಸಿತ ಕಾಣುವಂತಾಗಿದೆ.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕೆಂದು ಹಲವು ಬಾರಿ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜ್ಯ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಬೇಸರ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ 4.80 ಲಕ್ಷ ಬೀದಿಬದಿ ವ್ಯಾಪಾರಿಗಳ ಪೈಕಿ 1.80 ಲಕ್ಷ ವ್ಯಾಪಾರಿಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. ನಗರದಲ್ಲಿ 24,650 ವ್ಯಾಪಾರಿಗಳನ್ನು ಗುರುತಿಸಿದೆ. ಲಾಕ್ಡೌನ್ ಮುನ್ನ ರಾಜ್ಯದಲ್ಲಿ 2ರಿಂದ 3 ಕೋಟಿ ರೂಪಾಯಿ ವಹಿವಾಟು ಆಗುತಿತ್ತು. ಆದರೆ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿಗಳಿಗೆ ಒಬ್ಬರಿಗೆ ದಿನಕ್ಕೆ 3 ಸಾವಿರ ವ್ಯಾಪಾರವಾಗುವುದು ಕಷ್ಟವಾಗಿದೆ. ಲಾಕ್ಡೌನ್ ಅವಧಿಯಲ್ಲಿ ಸುಮಾರು 60 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಲಾಗಿದೆ.
ಹಾಗಾದ್ರೆ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಏನು ಮಾಡಬೇಕು?
ಬೀದಿಬದಿ ವ್ಯಾಪಾರಿಗಳನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಕೆಲವು ಸೌಲಭ್ಯಗಳನ್ನು ಘೋಷಣೆ ಮಾಡುವುದು ಅನಿವಾರ್ಯ. ಪ್ರೋತ್ಸಾಹಧನ ರೂಪವಾಗಿ ವ್ಯಾಪಾರಿಗಳಿಗೆ 10 ಸಾವಿರ ರೂ. ನೀಡಬೇಕು. ಉಚಿತ ದಿನಸಿ ಕಿಟ್, ವ್ಯಾಪಾರಿಗಳ ಮಕ್ಕಳ ಶಿಕ್ಷಣಕ್ಕೆ ಕಡಿಮೆ ದರದಲ್ಲಿ ಸಾಲ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ ಆರೋಗ್ಯ ವಿಮೆ (ಇಎಸ್ಐ) ಸೌಲಭ್ಯ ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ವಸತಿ ಆಶ್ರಯಗಳು, ಟಾರ್ಪೆಲಿನ್ ಸೇರಿದಂತೆ ವಿವಿಧ ಸೌಲಭ್ಯ ಒದಗಿಸುವಂತೆ ಕೋರಿ ಬೀದಿಬದಿ ವ್ಯಾಪಾರಿಗಳ ಒಕ್ಕೂಟ ಒಕ್ಕೂರಲಿನಿಂದ ಮನವಿ ಸಲ್ಲಿಸಿದೆ.
ಬಡವರ ಬಂಧು ಯೋಜನೆಗೆ ತಿಲಾಂಜಲಿ
ಬೀದಿಬದಿ ವ್ಯಾಪಾರಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ಮೀಟರ್ ಬಡ್ಡಿ ಮಾಫಿಯಾದಿಂದ ಪಾರು ಮಾಡಲು ಹಿಂದಿನ ಸಮ್ಮಿಶ್ರ ಸರ್ಕಾರ ಶೂನ್ಯ ದರದಲ್ಲಿ ಸಾಲ ನೀಡುವ ಬಡವರ ಬಂಧು ಯೋಜನೆ ಘೋಷಿಸಿತ್ತು. ಇದರಂತೆ ನೋಂದಾಯಿತ ವ್ಯಾಪಾರಿಗಳಿಗೆ 2ರಿಂದ 10 ಸಾವಿರ ರೂ. ಸಾಲ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತು. ಮೂರು ತಿಂಗಳೊಳಗೆ ಸಾಲ ಪಾವತಿಸಿದರೆ ಇನ್ನೊಂದು ಅವಧಿಗೆ ಸಾಲ ಪಡೆಯಬಹುದಾಗಿತ್ತು. ಆದರೆ ಈಗಿನ ಸರ್ಕಾರ ಯೋಜನೆಗೆ ಅನುದಾನ ಕಲ್ಪಿಸಿಲ್ಲ. ವ್ಯಾಪಾರಿಗಳ ಹಿತವನ್ನು ಅರಿತು ಸರ್ಕಾರ ಈ ಯೋಜನೆ ಮುಂದುವರೆಸಬೇಕು ಎಂದು ಸಂಘಟನೆ ರಾಜ್ಯಾಧ್ಯಕ್ಷ ರಂಗಸ್ವಾಮಿ ಒತ್ತಾಯಿಸಿದ್ದಾರೆ.
ಲಾಕ್ಡೌನ್ ಅನ್ಲಾಕ್ ಬಳಿಕ ಗ್ರಾಹಕರು ತರಕಾರಿ ಸೇರಿದಂತೆ ದಿನನಿತ್ಯದ ವಸ್ತುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚು ವ್ಯಾಪಾರಿಗಳು ಇರುವ ಜಾಗ ಅಥವಾ ಜನಸಂದಣಿಯಿಂದ ಕೂಡಿರುವ ಪ್ರದೇಶಗಳಿಗೆ ಗ್ರಾಹಕರು ಎಡತಾಕುತ್ತಿಲ್ಲ. ಒಂದು ವೇಳೆ ಖರೀದಿ ಮಾಡಿದರೂ ಗ್ರಾಹಕರು ಅಳೆದು ತೂಗಿ ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಗ್ರಾಹಕರ ಬಳಿ ಹಣವಿಲ್ಲದಿರುವುದು. ಲಾಕ್ಡೌನ್ ಎಫೆಕ್ಟ್ನಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದ ಪರಿಣಾಮ ಗ್ರಾಹಕರಲ್ಲಿ ಹಣದ ಅಭಾವ ತಲೆದೋರಿದೆ.
ಕೊರೊನಾ ಭೀತಿ ನಡುವೆ ವ್ಯಾಪಾರಿಗಳು ಮುಂಜಾಗ್ರತಾ ಕ್ರಮಗಳೊಂದಿಗೆ ವ್ಯಾಪಾರ ನಡೆಸಬೇಕಿದೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ವ್ಯಾಪಾರಿಗಳು ಪಿಪಿಇ ಕಿಟ್ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿ ತರಕಾರಿ ವ್ಯಾಪಾರಿ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರದಲ್ಲಿ ಕೊಂಚ ಪ್ರಗತಿಯಾಗಿದೆ ಎನ್ನುತ್ತಾರೆ ಪೀಣ್ಯದ ಬಳಿ ತರಕಾರಿ ಮಾರುವ ಅಂಗಡಿಯೊಂದರ ಮಾಲೀಕ ಜಗದೀಶ್.