ಬೆಂಗಳೂರು : ಕೋವಿಡ್ ನಿಯಂತ್ರಣದ ಸಲುವಾಗಿ 2021ರ ಜನವರಿ 8ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್ ನಡೆದು, ಜನವರಿ 16ರಂದು ಅಂದಿನ ಸಿಎಂ ಯಡಿಯೂರಪ್ಪ ಲಸೀಕಾಕರಣಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಆಗಿರುವ ಡಿ ಗ್ರೂಪ್ ನೌಕರರಿಗೆ ಲಸಿಕೆ ಕೊಡಲಾಯ್ತು.
ನಂತರ ಹಂತ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ, ಹಿರಿಯ ನಾಗರಿಕರಿಗೆ, ಯುವಕರಿಗೆ ಎರಡು ಡೋಸ್ ಲಸಿಕೆ ನೀಡಲಾಯಿತು. ಇದೀಗ ರೂಪಾಂತರಿ ಒಮಿಕ್ರಾನ್ ತಡೆಯಲು ಹಲವು ತಜ್ಞರು ಬೂಸ್ಟರ್ ಡೋಸ್ಗೆ ಶಿಫಾರಸು ಮಾಡಿದ್ದಾರೆ. ಜನವರಿ 10ರಿಂದ ಅಂದರೆ ನಾಳೆಯಿಂದ ರಾಜ್ಯವ್ಯಾಪಿ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ.
ಇದೇ ತಿಂಗಳ ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲು ಆರಂಭಿಸಲಾಯಿತು. ಇದೀಗ ಹಂತ ಹಂತವಾಗಿ ಬೂಸ್ಟರ್ ಡೋಸ್ ನೀಡಲು ಸರ್ಕಾರ ಮುಂದಾಗಿದೆ. ಬೂಸ್ಟರ್ ಡೋಸ್ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ತಯಾರಿ ನಡೆದಿದೆ.
ಬೆಂಗಳೂರಿನಲ್ಲಿ ಸಿಎಂ ಚಾಲನೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಾಳೆ ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಈ ಲಸಿಕಾಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಯಾರೆಲ್ಲಾ ಅರ್ಹರು?
- ಆರೋಗ್ಯ ಕಾರ್ಯಕರ್ತರು.
- ಮುಂಚೂಣಿ ಕಾರ್ಯಕರ್ತರು.
- 60 ವರ್ಷ ಮೇಲ್ಪಟ್ಟ ಕೋಮಾರ್ಬಿಡಿಟೀಸ್ ಸಮಸ್ಯೆ ಇರುವವರು.
ಬೂಸ್ಟರ್ ಡೋಸ್ ಪಡೆಯುವ ವಿಧಾನ :
- ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿದಂತೆ ಎರಡು ಡೋಸ್ ಪಡೆದಿರಬೇಕು.
- ಎರಡನೇ ಡೋಸ್ ಪಡೆದು 9 ತಿಂಗಳು (39 ವಾರಗಳಾಗಿರಬೇಕು)ಆಗಿರಬೇಕು.
- ಎರಡು ಡೋಸ್ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಬೇಕು.
ಬೂಸ್ಟರ್ ಡೋಸ್ಗೆ ಯಾವ ಲಸಿಕೆ ನೀಡಲಾಗುತ್ತದೆ?
- ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮೂರನೇ ಡೋಸ್ ಕೋವಿಶೀಲ್ಡ್ ಅನ್ನೇ ಪಡೆಯಬೇಕು.
- ಕೋವ್ಯಾಕ್ಸಿನ್ ಪಡೆದವರು ಮೂರನೇ ಡೋಸ್ಗೆ ಕೋವ್ಯಾಕ್ಸಿನ್ ಅನ್ನೇ ಪಡೆಯಬೇಕು.
ಎಲ್ಲೆಲ್ಲಿ ಬೂಸ್ಟರ್ ಡೋಸ್ ಲಭ್ಯ?
- ಎಲ್ಲಾ ಸರ್ಕಾರಿ ಲಸಿಕಾಕರಣ ಕೇಂದ್ರಗಳಲ್ಲಿ ಲಭ್ಯ.
- ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯ.
- ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಿಗಲಿದೆ.
ಇದನ್ನೂ ಓದಿ: ಬಟಾ ಬಯಲಾಯ್ತು ನಕಲಿ ವಿಕಲಚೇತನನ ಬಣ್ಣ.. ಕೈ ಇಲ್ಲ ಎಂದು ಭಿಕ್ಷೆ ಬೇಡುತ್ತಿದ್ದವನಿಗೆ ತಟ್ಟಿತು ಬಿಸಿ..
ನೋಂದಣಿ ಮತ್ತು ಲಸಿಕಾಕರಣಕ್ಕೆ ವೇಳೆಯನ್ನು ನಿಗದಿಪಡಿಸಿಕೊಳ್ಳುವ ಸೇವೆಗಳನ್ನು ಆನ್‌ಲೈನ್ ಮತ್ತು ಆನ್‌ಸೈಟ್ (ವಾಕ್-ಇನ್) ವಿಧಾನಗಳ ಮೂಲಕ ಪಡೆದುಕೊಳ್ಳಬಹುದು. ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಂಡ ವಿವರವನ್ನು ಕೋವಿನ್ ಪೋರ್ಟಲ್ ಮುಖಾಂತರ ಡಿಜಿಟಲ್ ಲಸಿಕಾ ಪ್ರಮಾಣ ಪತ್ರ ಪಡೆಯಬಹುದು.
ಲಸಿಕೆ ಮಾಹಿತಿ : ರಾಜ್ಯವು 18 ವರ್ಷ ಮೇಲ್ಪಟ್ಟವರಿಗೆ 4.89 ಕೋಟಿ ಲಸಿಕಾಕರಣ ನಡೆಸುವ ಗುರಿ ಹೊಂದಿದೆ. ಈವರೆಗೂ 4.8 ಕೋಟಿ (ಶೇ. 99) ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 3.9 ಕೋಟಿ (ಶೇ.81) ಜನರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ.
15-18 ವರ್ಷದ 31.75 ಲಕ್ಷ ಫಲಾನುಭವಿಗಳಿಗೆ ಲಸಿಕಾಕರಣ ನಡೆಸುವ ಗುರಿ ಹೊಂದಲಾಗಿದೆ. 15.5 ಲಕ್ಷ (ಶೇ. 49) ಫಲಾನುಭವಿಗಳಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ.