ಬೆಂಗಳೂರು: ಬಿಡಿಎಗೆ ಸೇರಿದ ಜಾಗದಲ್ಲಿ ಕಳೆದ 12 ವರ್ಷಗಳಿಂದ ಮನೆ ಕಟ್ಟಿಕೊಂಡಿರುವವರಿಗೆ ಆ ಮನೆಗಳನ್ನು ದಂಡದ ಹಣ ಕಟ್ಟಿಸಿಕೊಂಡು ಸಕ್ರಮಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.
ಬಿಡಿಎ ಬಡಾವಣೆಗಳನ್ನು ನಿರ್ಮಿಸುವ ಮೊದಲೇ ಆ ಜಾಗದಲ್ಲಿ ಸಣ್ಣ ನಿವೇಶಗಳನ್ನು ಮಾಡಿಕೊಂಡು ಮನೆ ಕಟ್ಟಿಕೊಂಡಿರುವವರಿಗೆ ಮಾರ್ಗಸೂಚಿ ದರ ಹಾಗೂ ದಂಡ ವಿಧಿಸಿ ಅವುಗಳನ್ನು ಸಕ್ರಮಗೊಳಿಸಲು ಈ ತಿದ್ದುಪಡಿ ವಿಧೇಯಕ ಅವಕಾಶ ನೀಡುತ್ತದೆ.
ಈ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಸೇರಿ ಹಲವು ಸದಸ್ಯರು ಹಾಗೂ ಆಡಳಿತರೂಢಾ ಬಿಜೆಪಿಯ ಬೋಪಯ್ಯ ಸಹ ವಿರೋಧ ವ್ಯಕ್ತಪಡಿಸಿ, ಈ ವಿಧೇಯಕವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದರಾದರೂ, ಸರ್ಕಾರದ ಪರವಾಗಿ ಇದಕ್ಕೆ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಇದಕ್ಕೆ ಒಪ್ಪದೆ ಬಿಡಿಎ ಜಾಗದಲ್ಲಿ 20-30 ಅಳತೆ ನಿವೇಶನದಲ್ಲಿ 30-40 ಅಳತೆ ನಿವೇಶನದಲ್ಲಿ ಕೆಲವರು ಮನೆ ಕಟ್ಟಿಸಿಕೊಂಡಿದ್ದಾರೆ. ಹಾಗೆಯೇ 40-60 ನಿವೇಶನಗಳಲ್ಲೂ ಮನೆ ಕಟ್ಟಿಕೊಂಡಿದ್ದಾರೆ. ಇಂತಹವರಿಗೆ ಅವುಗಳನ್ನು ಸಕ್ರಮಗೊಳಿಸಲು ಈ ಕಾಯ್ದೆ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಡಿಎ ಜಾಗದಲ್ಲಿ ಮೂಲ ನಿವೇಶನವನ್ನು ಹೊರತುಪಡಿಸಿ ಕಟ್ಟಡ ಕಟ್ಟಿರುವ 20-30 ಅಳತೆವರೆಗಿನ ನಿವೇಶನಕ್ಕೆ ಪ್ರಸ್ತುತ ಮಾರ್ಗಸೂಚಿ ಮೂಲದ ಶೇ.10, 20-30 ಕ್ಕಿಂತ ಹೆಚ್ಚು ಮತ್ತು 30-40 ವರೆಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ. 25, 30-40 ನಿವೇಶನಕ್ಕೆ ಮಾರ್ಗಸೂಚಿ ಮೌಲ್ಯದ ಶೇ. 40 ಹಾಗೂ 40-60 ರಿಂದ 50-80 ವರೆಗಿನ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಮಾರ್ಗಸೂಚಿ ಮೌಲ್ಯದ ಶೇ. 50 ಮತ್ತು ದಂಡ ವಿಧಿಸಿ ಇವುಗಳ್ನು ಸಕ್ರಮ ಮಾಡಿಕೊಳ್ಳಲು ಈ ವಿಧೇಯಕ ಅನುವು ಮಾಡಿಕೊಡಲಿದೆ.
ಇದಕ್ಕೂ ಮುನ್ನ ಜೆಡಿಎಸ್ ಸದಸ್ಯ ಎ.ಟಿ. ರಾಮಸ್ವಾಮಿ ಮಾತನಾಡಿ, ಈ ವಿಧೇಯಕದಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಲೂಟಿಕೋರರಿಗೆ ಇದು ಅನುಕೂಲವಾಗುತ್ತದೆ. ಬಿಬಿಎಂಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಧೇಯಕವನ್ನು ತರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಬದ್ಧ ಸ್ವಾಧೀನತೆ ಕೊಡಲು ಇದನ್ನು ತಂದಿದ್ದೀರಾ ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಜಾಗ ಕಬಳಿಕೆ ಬಡವರು ಮಾಡಿಕೊಂಡಿಲ್ಲ. ಲೂಟಿಕೋರರೇ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವುದು. ಅಂತವರಿಗೆ ಮಾರ್ಗಸೂಚಿ ಬೆಲೆ ನಿಗದಿ ಮಾಡಿದ್ದೀರಾ, ಬಿಡಿಎಗೆ ಶಕ್ತಿ ತುಂಬಲು ಸರ್ಕಾರದ ಪ್ರಯತ್ನವಿಲ್ಲ. ಲೂಟಿಕೋರರಿಗೆ ಕಡಿಮೆ ಬೆಲೆಗೆ ನೀಡೋದು ನಿಮ್ಮ ಗುರಿ ಎಂದು ಹರಿಹಾಯ್ದರು.
ಶಾಸಕ ಎ.ಟಿ.ರಾಮಸ್ವಾಮಿ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಎಲ್ಲವನ್ನೂ ಗಮನಿಸಿಯೇ ಈ ವಿಧೇಯಕ ತಂದಿದ್ದೇವೆ. ಗೈಡ್ ಲೈನ್ ವ್ಯಾಲ್ಯೂ ಗಮನದಲ್ಲಿಟ್ಟುಕೊಂಡೇ ವಿಧೇಯಕ ತರಲಾಗಿದೆ ಎಂದು ಸಮರ್ಥಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, 30-40 ವರ್ಷಗಳಿಂದ ಇದು ಪೆಂಡಿಂಗ್ ಇತ್ತು. ಬಿಡಿಎ ಆಗುತ್ತಲೇ ಜಮೀನಿನವರು ಸೈಟ್ ಮಾಡಿ ಮಾರಿದ್ದಾರೆ. ಹೀಗಾಗಿ ಇದನ್ನು ಸಕ್ರಮ ಮಾಡಲು ಹೊರಟಿದ್ದೇವೆ. ಇನ್ನು 50 ವರ್ಷ ಬಿಟ್ಟರೂ ಅವರು ಅಕ್ರಮದಲ್ಲೇ ಇರುತ್ತಾರೆ. ಅದು ಲೀಗಲ್ ಆಗೋದು ಯಾವಾಗ?. ಹಾಗಾಗಿ, ಈ ವಿಧೇಯಕವನ್ನು ತರಲಾಗಿದೆ. ಇದು ಉತ್ತಮವಾದ ಬಿಲ್, ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು.