ಬೆಂಗಳೂರು : ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಇಂದು ನಡೆದ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಸಂಘಟನೆಗಳ ನಿಷೇಧ ಸಂಬಂಧ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ಚಟುವಟಿಕೆ ವಿರುದ್ಧದ ಪ್ರಕರಣಗಳು, ಇತರೆ ಸಂಘಟನೆಗಳ ಸಂಪರ್ಕ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ವಿವರ ಬಂದ ಬಳಿಕ ರಾಜ್ಯ ಕಾನೂನು ಇಲಾಖೆ ಜೊತೆ ಚರ್ಚಿಸಿ ಚಟುವಟಿಕೆ ನಿಷೇಧಿಸಲು ತೀರ್ಮಾನ ಕೈಗೊಳ್ಳುತ್ತೇವೆ. ನಂತರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂಘಟನೆ ನಿಷೇಧಿಸುವ ಕುರಿತು ಶಿಫಾರಸು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಹೆಸರು ಬದಲಾಯಿಸಿಕೊಂಡು ಕುಕೃತ್ಯ ಎಸಗುವ ಸಂಘಟನೆಗಳ ಸಂಬಂಧ ಮಾಹಿತಿ ಕಲೆ ಹಾಕಲು ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಅನೇಕ ಕೊಲೆಗಳು, ಉಗ್ರಗಾಮಿ ಸಂಘಟನೆಗಳ ಚಟುವಟಿಕೆ ಹಲವು ವರ್ಷದಿಂದ ನಡೆಯುತ್ತಿದೆ. ಆ ಜಾಲವನ್ನು ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಇದು ಆತಂಕಕಾರಿ ವಿಚಾರವಾಗಿದೆ ಎಂದು ತಿಳಿಸಿದರು.
ಎಸ್‌ಡಿಪಿಐ, ಪಿಎಫ್ಐ ವಿರುದ್ಧದ ಪ್ರಕರಣಗಳನ್ನು ಹಿಂದಿನ ಸರ್ಕಾರ ತೆಗೆದು ಹಾಕಿತ್ತು. ಇದರಿಂದ ಅವರಿಗೆ ಉತ್ತೇಜನ ನೀಡಿದಂತಾಗಿತ್ತು. ತನ್ವೀರ್ ಸೇಠ್ ಮೇಲೆ ಹಲ್ಲೆ, ನಮ್ಮ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ, ಗಲಭೆ, ಹಿಂಸಾಚಾರದಲ್ಲೂ ಭಾಗಿಯಾಗಿದ್ದರು. ಸಿಎಎ ಕಾಯ್ದೆ ಬೆಂಬಲಿಗ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಈ ಸಂಘಟನೆಗಳು ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಜೊತೆಗೆ ಉಗ್ರಗಾಮಿ ಸಂಸ್ಥೆಗಳು ಇವರ ಸಂಪರ್ಕದಲ್ಲಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ ಎಂದರು.
ಹಲವು ಹೆಸರು ಬದಲು ಮಾಡಿ ಈಗ ಪಿಎಫ್ಐ ಮತ್ತು ಎಸ್್ಡಿಪಿಐ ಸಂಘಟನೆ ಹುಟ್ಟಿಕೊಂಡಿದೆ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಅವರ ಚಟುವಟಿಕೆ ನಿಷೇಧಿಸಲು ನಾವು ಎಲ್ಲ ತಯಾರಿ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.