ಬೆಂಗಳೂರು: ಬಿಬಿಎಂಪಿಯ 2022- 23ನೇ ಸಾಲಿನ ಆಯವ್ಯಯದ ಗಾತ್ರವನ್ನು 377.5 ಕೋಟಿ ರೂಪಾಯಿಗೆ ಹೆಚ್ಚಿಸಿ ಒಟ್ಟಾರೆ 10,858.43 ಕೊಟಿ ರೂ. ಆಯವ್ಯಯಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈಗ ಹೆಚ್ಚುವರಿ ಮೊತ್ತದ ಹೊಂದಾಣಿಕೆಗೆ ಪಾಲಿಕೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪಾಲಿಕೆಯಿಂದ 10,480.93 ಕೋಟಿ ರೂ. ಬಜೆಟ್ ಮಂಡಿಸಲಾಗಿತ್ತು. ಘನತ್ಯಾಜ್ಯ ಯಂತ್ರಗಳು, ಘಟಕಗಳು, ಸರ್ಕಾರಕ್ಕೆ ಪಾವತಿಸಬೇಕಾದ ವಂತಿಗೆ, ನೀರಿನ ಕೊಳವೆ ಬಾವಿ ನಿರ್ವಹಣೆ, ದಿನಾಚರಣೆ ಮತ್ತು ಪತ್ರಕರ್ತರ ವೈದ್ಯಕೀಯ ಪರಿಹಾರ ವೆಚ್ಚಕ್ಕೆಂದು 377.5 ಕೋಟಿ ರೂ. ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲ ಹೆಚ್ಚುವರಿ ಗಾತ್ರವನ್ನು ಪಾಲಿಕೆ ತನ್ನ ಆದಾಯ ಮೂಲಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿರುವುದು ಸಂಕಷ್ಟ ತಂದಿದೆ. 2021 22ನೇ ಸಾಲಿನಲ್ಲಿಯೂ 655 ಕೋಟಿ ರೂ. ಬಜೆಟ್ ಗಾತ್ರ ಹೆಚ್ಚಿಸಿದ್ದಾಗ ಆಸ್ತಿ ತೆರಿಗೆ ಸಂಗ್ರಹ ಗುರಿ ಹೆಚ್ಚಿಸಲಾಗಿತ್ತು ಎಂದು ಹೇಳಿದ್ದಾರೆ.
10,858.43 ಕೋಟಿ ಬಜೆಟ್ ಗಾತ್ರ: ಪಾಲಿಕೆಯ ಇತಿಹಾಸದಲ್ಲಿ ಈವರೆಗೆ 4 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿಲ್ಲ. ಆದರೆ, ಕಳೆದ 2021-22 ಸಾಲಿನಲ್ಲಿ ಸರ್ಕಾರದ ಹಿಗ್ಗಿಸಿದ ಬಜೆಟ್ ಗಾತ್ರ ಹೊಂದಾಣಿಕೆಗೆ 4,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಗುರಿ ನಿಗದಿ ಮಾಡಲಾಗಿತ್ತು. ಅದರಲ್ಲಿ 3,074 ಕೋಟಿ ರೂ. ತೆರಿಗೆ ಸಂಗ್ರಹವಾಗುವ ಮೂಲಕ ಕೇವಲ ಶೇ.68 ಗುರಿ ಮುಟ್ಟಲಾಗಿತ್ತು.
ಈ ಸಂಗ್ರಹಣಾ ಮೊತ್ತವೇ ಪಾಲಿಕೆ ಇತಿಹಾಸದಲ್ಲಿನ ಅತ್ಯಧಿಕ ಆಸ್ತಿ ತೆರಿಗೆ ಸಂಗ್ರಹದ ಸಾಧನೆಯೂ ಆಗಿದೆ. ಈಗ ಪುನಃ 2022 23ನೇ ಸಾಲಿನಲ್ಲಿ ಕಂದಾಯ ವಿಭಾಗದಿಂದ 4,189 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹಣಕಾಸು ವಿಭಾಗದ ಮುಂದುವರಿಸಲಾಗಿತ್ತು. ಅದನ್ನು ಒಪ್ಪಿಕೊಂಡು ಬಜೆಟ್ ಮಂಡಿಸಲಾಗಿದ್ದು, ಈಗ ಹೆಚ್ಚುವರಿ ಆದಾಯ ತೋರಿಸಲು ಆಸ್ತಿ ತೆರಿಗೆ ಮೂಲದ ಮೇಲೆಯೇ ಹೆಚ್ಚು ಗಮನ ಕೇಂದ್ರೀಕರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ: ನಾಳೆ ದೆಹಲಿಯತ್ತ ಸಿಎಂ ಬೊಮ್ಮಾಯಿ.. ವರಿಷ್ಠರ ಜೊತೆ ಸಂಪುಟ ಸರ್ಜರಿ ಚರ್ಚೆ ಸಾಧ್ಯತೆ