ಬೆಂಗಳೂರು: ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಸರ್ಕಾರ ಸೂಚಿಸಿದ್ದಕ್ಕೆ ನೀಡಿದ್ದೇನೆ ಎಂದು ಅವರು ಹೇಳಿಕೊಂಡರೂ, ಕಾಂಗ್ರೆಸ್ ತನ್ನ ಹೋರಾಟದ ಫಲ ಎನ್ನುತ್ತಿದೆ. ಸದ್ಯ ಈಶ್ವರಪ್ಪ ವಿರುದ್ಧದ ಕಾಂಗ್ರೆಸ್ ಹೋರಾಟ ಮುಂದುವರೆದಿದ್ದು, ಯಾವ ರೀತಿ ತಾರ್ಕಿಕ ಅಂತ್ಯ ಕಾಣಲಿದೆ ಎನ್ನುವ ಕುತೂಹಲ ಮೂಡಿದೆ. ಒಂದೆಡೆ ಈಶ್ವರಪ್ಪ ಬಂಧನ ಆಗಲೇಬೇಕೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ನಾಯಕರು ನ್ಯಾಯಾಂಗ ತನಿಖೆ ನಡೆಯಲಿ ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿಯೇ 9 ಪ್ರತ್ಯೇಕ ತಂಡಗಳನ್ನು ರಚಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಂದಿನ ಐದು ದಿನ ಕಾಂಗ್ರೆಸ್ ಹೋರಾಟ ನಡೆಯಲಿದೆ. ಎರಡು ದಿನದ ಹಿಂದೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ವಿಧಾನಸೌಧದಲ್ಲಿ ಒಂದು ದಿನ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಇಂದು ಇನ್ನೊಂದು ಹಂತದ ಹೋರಾಟಕ್ಕೆ ನಾಂದಿ ಹಾಡಲಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ ಕೆ.ಜೆ. ಜಾರ್ಜ್ ರಾಜೀನಾಮೆ ಪಡೆದಿದ್ದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ ಎಂಬ ಉತ್ಸಾಹದಲ್ಲಿರುವ ಕಾಂಗ್ರೆಸ್ ನಾಯಕರು ಶತಾಯ ಗತಾಯ ಸಂತೋಷ ಕೆ ಪಾಟೀಲ್ ಆತ್ಮಹತ್ಯೆ ಹಿಂದೆ ಈಶ್ವರಪ್ಪ ಕೈವಾಡ ಇದೆ ಎಂದು ಸಾಬೀತು ಪಡಿಸುವ ಹಾಗೂ ನ್ಯಾಯಾಂಗ ತನಿಖೆ ನಡೆದರೆ ಈಶ್ವರಪ್ಪ ಶಿಕ್ಷಗೆ ಒಳಗಾಗಲಿದ್ದಾರೆ ಎನ್ನುವ ನಂಬಿಕೆಯಲ್ಲಿದೆ.

ಅಲ್ಲದೇ ಈಗಾಗಲೇ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ ಎಂದು ಹೇಳಿಕೊಂಡಿರುವ ಕಾಂಗ್ರೆಸ್ ನಾಯಕರು ಇನ್ನಷ್ಟು ಬಿಜೆಪಿ ಸಚಿವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈಶ್ವರಪ್ಪ ವಿರುದ್ಧದ ಹೋರಾಟದ ಜತೆಗೆ ಸರ್ಕಾರದ 40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ವಿವಿಧ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಇನ್ನೂ ಹಲವು ಸಚಿವರ ತಲೆದಂಡವಾಗಲಿದೆ ಎಂದು ಭವಿಷ್ಯ ನುಡಿದಿದೆ. ಸದ್ಯ ಅಂತವರ ವಿರುದ್ಧವೂ ಹೋರಾಟ ಆರಂಭಿಸುವುದು ಕಾಂಗ್ರೆಸ್ ಗುರಿ. ಇಂತಹ ಹೋರಾಟ ಮೂಲಕ ಜನರ ದೃಷ್ಟಿಯಲ್ಲಿ ಒಂದಿಷ್ಟು ಇಮೇಜ್ ಹೆಚ್ಚಿಸಿಕೊಳ್ಳುವುದು ಕೈ ನಾಯಕರ ಆಶಯವಾಗಿದೆ.

ಈಶ್ವರಪ್ಪ ವಿರುದ್ಧ ಹೋರಾಟ ತೀವ್ರಗೊಳಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಕಾಂಗ್ರೆಸ್ ಉದ್ದೇಶ. ತನ್ಮೂಲಕ ಚುನಾವಣಾ ವರ್ಷದಲ್ಲಿ ಬಿಜೆಪಿಯ ಒಂದಿಷ್ಟು ಭ್ರಷ್ಟಾಚಾರ ಬಯಲಿಗೆಳೆದು, ಜನರ ಗಮನ ಸೆಳೆಯುವ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಿದ್ಧತೆಯನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರತಿಭಟನೆ ಹೆಸರಿನಲ್ಲಿ ರಾಜ್ಯದೆಲ್ಲೆಡೆ ಸುತ್ತಿ ಬಿಜೆಪಿಯ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ.

ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಇದೇ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾತ್ರ ಜನರಿಗೆ ತಿಳಿಸಿದರೆ ಸಾಲದು, ಜನರ ಮನಸ್ಸಿನಲ್ಲಿ ನಾವು ನೆಲೆಸಬೇಕಾದರೆ ಇಂದು ಸರ್ಕಾರ ಯಾವ ರೀತಿಯ ಭ್ರಷ್ಟಾಚಾರ ನಡೆಸುತ್ತಿದೆ, ಜನರ ಹಣವನ್ನು ಹೇಗೆ ಪೋಲು ಮಾಡುತ್ತಿದೆ, ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಜನರ ಹಣವನ್ನು ವ್ಯಯ ಮಾಡಿದೆ, ಸಚಿವರ ಭ್ರಷ್ಟಾಚಾರ, ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಿ ಎನ್ನುವ ಸಂದೇಶ ನೀಡಿ ತೆರಳಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಜನರಿಂದ ಯಾವ ರೀತಿ ಪೂರಕ ಸ್ಪಂಧನೆ ಸಿಗಲಿದೆ ಎನ್ನುವುದಕ್ಕೆ ಮುಂದಿನ ಚುನಾವಣೆ ಫಲಿತಾಂಶ ಉತ್ತರವಾಗಿ ಸಿಗಲಿದೆ.
ಇದನ್ನೂ ಓದಿ: ಈಶ್ವರಪ್ಪ ಬಂಧನಕ್ಕೆ ಆಗ್ರಹ: ಇಂದಿನಿಂದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ