ಬೆಂಗಳೂರು: ಇತ್ತ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಅತ್ತ ರಾಜ್ಯ ಕಾಂಗ್ರೆಸ್ ನಾಯಕರು ಕಾದು ನೋಡುವ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ.
ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಅಂತರಿಕ ಕಲಹವನ್ನು ರಾಜ್ಯ ಕಾಂಗ್ರೆಸ್ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಂಡಾಯ ಶಾಸಕರ ನಡೆಯನ್ನು ಕೈ ನಾಯಕರು ಗಮನಿಸುತ್ತಿದ್ದಾರೆ. ಒಂದು ವೇಳೆ ಬಂಡಾಯ ತೀವ್ರವಾದರೆ ಮಾತ್ರ ಬಳಿಕ ಅಖಾಡಕ್ಕೆ ಇಳಿಯಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಬಂಡಾಯ ಶಾಸಕರ ಪ್ರತಿ ನಡೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಯಲ್ಲಿನ ಬಂಡಾಯ ಇನ್ನಷ್ಟು ತೀವ್ರವಾದರೆ ಅದರಿಂದ ಕಾಂಗ್ರೆಸ್ಗೆ ಸಹಜವಾಗಿಯೇ ಲಾಭ ಆಗಲಿದೆ. ಕೊರೊನಾ ಸಂದರ್ಭದಲ್ಲಿ ಬಿಜೆಪಿಯಲ್ಲಿನ ತಿಕ್ಕಾಟ ಪರೋಕ್ಷವಾಗಿ ಕಾಂಗ್ರೆಸ್ಗೆ ಅನುಕೂಲವಾಗಲಿದೆ ಎಂಬುದು ಕೈ ನಾಯಕರ ಅಭಿಪ್ರಾಯವಾಗಿದೆ.
ಸದ್ಯಕ್ಕೆ ಕಾದು ನೋಡುವ ತಂತ್ರಗಾರಿಕೆಯಲ್ಲಿರುವ ಕೈ ನಾಯಕರು, ಪ್ರಸಕ್ತ ಬಿಜೆಪಿಯ ಆಂತರಿಕ ರಾಜಕೀಯ ಕಚ್ಚಾಟದಲ್ಲಿ ಎಂಟ್ರಿ ಕೊಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದು, ಕಮಲ ಕಲಹ ಅತಿರೇಕಕ್ಕೆ ಹೋದರೆ ಮಾತ್ರ ತಮ್ಮ ಕಾರ್ಯತಂತ್ರ ರೂಪಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.