ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಸಚಿವ ಕೆ.ಎಸ್. ಈಶ್ವರಪ್ಪ ಕೈವಾಡ ಇದೆ. ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸುವಂತೆ ಹಾಗೂ ಸೂಕ್ತ ತನಿಖೆ ನಡೆಸುವಂತೆ ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸುವಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದರು.
ಕಾಂಗ್ರೆಸ್ ನಿಯೋಗ ಸಲ್ಲಿಸಿದ ಪತ್ರದಲ್ಲೇನಿದೆ?: 'ನಾವು ತಮ್ಮಲ್ಲಿ ಗೌರವ ಪೂರ್ವಕವಾಗಿ ಮನವಿ ಮಾಡುವುದೇನೆಂದರೆ, ಬೆಳಗಾವಿ ಜಿಲ್ಲೆಯ ಸಂತೋಷ್ ಕೆ. ಪಾಟೀಲ್ ಅವರು ಓರ್ವ ಗುತ್ತಿಗೆದಾರ ಮತ್ತು ಹಿಂದೂ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಇವರು ಏ.12 ರಂದು ತಮ್ಮ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಹೊಣೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆತ್ಮಹತ್ಯೆ ಸಂದೇಶ ರವಾನಿಸಿ ಉಡುಪಿಯ ಖಾಸಗಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'.
ಈ ಹಿನ್ನೆಲೆ ಸಚಿವರು ಆತ್ಮಹತ್ಯೆಗೆ ನೇರ ಹೊಣೆಯಾಗಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಇದಲ್ಲದೆ, ಅವರು ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಇತರ ಹಿರಿಯ ನಾಯಕರಲ್ಲಿ ತಮ್ಮ ಪತ್ನಿ ಮತ್ತು ಮಗುವಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆಂದು ಹೇಳಲಾದ ವಾಟ್ಸ್ ಆ್ಯಪ್ ಸಂದೇಶದ ಪ್ರತಿಯನ್ನು ನಿಮ್ಮ ಪರಿಗಣನೆಗಾಗಿ ಇಲ್ಲಿ ಲಗತ್ತಿಸಲಾಗಿದೆ ಎಂದು ತಿಳಿಸಲಾಗಿದೆ.
ಸುದೀರ್ಘ ಮೂರು ಪುಟದ ಪತ್ರದಲ್ಲಿ ಸಂತೋಷ್ ಅವರ ವಾಟ್ಸ್ ಆ್ಯಪ್ ಸಂದೇಶವನ್ನು ವಿವರಿಸಿರುವ ಕಾಂಗ್ರೆಸ್ ನಾಯಕರು, ಡೆತ್ ನೋಟ್ ಪ್ರಕಾರ ಕೆ.ಎಸ್. ಈಶ್ವರಪ್ಪ ಮತ್ತು ಅವರ ಸಹಚರರು ಎಸಗಿದ ನಿರಂತರ ಕಿರುಕುಳ ಮತ್ತು ಕ್ರೌರ್ಯವು ಆತ್ಮಹತ್ಯೆಗೆ ಪ್ರಚೋದನೆಯಾಗಿದೆ. ಒಬ್ಬ ವ್ಯಕ್ತಿಯ ಜೀವನವು ಅಮೂಲ್ಯವಾದುದು. ಅದಕ್ಕಾಗಿಯೇ ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಯಾವುದೇ ರೀತಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಅತಿಕ್ರಮಣವನ್ನು ತಡೆಗಟ್ಟಲು ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಲ್ಪಿಸಲಾಗಿದೆ ಮತ್ತು ಒಬ್ಬ ವ್ಯಕ್ತಿಗೆ ಅಗತ್ಯವಾದ ಎಲ್ಲಾ ಮಾನವ ಹಕ್ಕುಗಳನ್ನು ನೀಡಲಾಗಿದೆ. ಅನುಚ್ಛೇದ-21 ರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಸಾಂವಿಧಾನಿಕ ಆಜ್ಞೆಯಾಗಿದೆ. ಮೃತ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಈ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ.
ದೇಶದ ಹಿತಾಸಕ್ತಿ ಕಾಪಾಡಲು ನಾನು ಚೌಕಿದಾರ್ ಮತ್ತು 'ನಾ ಖಾವೂಂಗಾ, ನಾ ಖಾನೆ ದುಂಗಾ' (ನಾನು ತಿನ್ನುವುದಿಲ್ಲ ಮತ್ತು ಇತರರಿಗೆ ಲಂಚ ತಿನ್ನಲು ಬಿಡುವುದಿಲ್ಲ) ಎಂದು ಹೇಳಿಕೊಳ್ಳುತ್ತಿರುವ ಪ್ರಧಾನ ಮಂತ್ರಿಗಳು ಮತ್ತು ಸಂಬಂಧಪಟ್ಟವರು, ಕೇಂದ್ರ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಮೃತ ವ್ಯಕ್ತಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ ಹಾಗೂ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಘಟನೆಯು ಕರ್ನಾಟಕದ ಭ್ರಷ್ಟಾಚಾರವು ಹದ್ದು ಮೀರಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಕೆ.ಎಸ್.ಈಶ್ವರಪ್ಪ ಮತ್ತು ಅವರ ಸಂಗಡಿಗರನ್ನು ಅತಿಯಾಗಿ ನಂಬಿ 4 ಕೋಟಿ ರೂ.ಗಳ ಅಂದಾಜು 108ಕ್ಕೂ ಹೆಚ್ಚು ಕಾಮಗಾರಿಗಳನ್ನು ಅಧಿಕಾರಿಗಳಿಂದ ಕಾಮಗಾರಿ ಆದೇಶವಿಲ್ಲದೆ ನಿರ್ವಹಿಸಿದ ಅಮಾಯಕನೊಬ್ಬ ವಿಷಮ ಪರಿಸ್ಥಿತಿಗೆ ಬಲಿಯಾಗಿದ್ದಾನೆ. ಈಶ್ವರಪ್ಪ ಮತ್ತು ಅವರ ಮಿತ್ರರು ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಪ್ರಮುಖ ಕಾರಣರಾಗಿದ್ದಾರೆ. ಇದು ಐಪಿಸಿಯ ಸೆಕ್ಷನ್ -306 ರ ನಿಬಂಧನೆಗಳ ಪ್ರಕಾರ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ -13 ರ ನಿಬಂಧನೆಗಳ ಅಡಿಯಲ್ಲಿ ಮರಣದಂಡನೆ ವಿಧಿಸಬಹುದಾದ ಅಪರಾಧವಾಗಿದೆ. ಮಾಡಿದ ಕೆಲಸಗಳ ಹಣ ಬಿಡುಗಡೆಗೆ ಕಮಿಷನ್ ಕೇಳುವುದು ಶಿಕ್ಷಾರ್ಹ ಅಪರಾಧವಲ್ಲದೆ ಬೇರೇನೂ ಅಲ್ಲ. ಇದರಿಂದ ತಾವು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಮಂತ್ರಿಮಂಡಲದಿಂದ ಕೆ.ಎಸ್.ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು.
ಕೆ.ಎಸ್.ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಐಪಿಸಿ ಯ ಸೆಕ್ಷನ್-306 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್-13 ಮತ್ತು ಕಾನೂನಿನ ಇತರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆಯನ್ನು ತಕ್ಷಣವೇ ದಾಖಲಿಸಬೇಕು. ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು. ಇದೆಲ್ಲಕ್ಕೂ ತಾವು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಇದ್ದರು.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ.. ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ: ಬಿಎಸ್ವೈ