ಬೆಂಗಳೂರು: ಕೇಂದ್ರ ಸಚಿವ ಸಂಪುಟ ಪುನಾರಚನೆ ಮದರಿಯಲ್ಲೇ ರಾಜ್ಯದಲ್ಲಿಯೂ ಸಂಪುಟ ಪುನಾರಚನೆ ಕಸರತ್ತು ಸದ್ದಿಲ್ಲದೇ ಆರಂಭಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಕೆಲವರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಕೇಂದ್ರ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸಂಪುಟ ಪುನಾರಚನೆ ಮೂಲಕ ಅಸಮರ್ಥರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿದ್ದು, ಕೆಲವರನ್ನು ಸಂಘಟನೆಗೆ ಬಳಸಿಕೊಳ್ಳುವ ಉದ್ದೇಶದಿಂದಲೂ ಸಂಪುಟದಿಂದ ಕೈಬಿಡಲಾಗಿದೆ. ಅದೇ ಮಾದರಿಯಲ್ಲಿ ಜುಲೈ ಅಂತ್ಯಕ್ಕೆ ಯಡಿಯೂರಪ್ಪ ಸರ್ಕಾರಕ್ಕೂ ಎರಡು ವರ್ಷ ತುಂಬುತ್ತಿದ್ದು ಮುಂಬರಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸಂಪುಟ ಪುನಾರಚಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಸದ್ಯ ಯಡಿಯೂರಪ್ಪ ಸಂಪುಟದಲ್ಲಿ ಎರಡು ಸ್ಥಾನಗಳ ಮಾತ್ರ ಖಾಲಿ ಉಳಿದಿದ್ದು, ಕೊಟ್ಟ ಮಾತಿನಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಆರ್.ಆರ್.ನಗರದಿಂದ ಗೆದ್ದಿರುವ ಶಾಸಕ ಮುನಿರತ್ನಗೆ ಒಂದು ಸ್ಥಾನ ನೀಡಬೇಕಿದ್ದು, ಸಿಡಿ ಹಗರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿಗೆ ಇನ್ನೊಂದು ಸ್ಥಾನ ನೀಡಬೇಕಿದೆ. ಹಾಗಾಗಿ ಸಂಪುಟ ವಿಸ್ತರಣೆ ಬದಲು ಪುನಾರಚನೆ ಮೂಲಕ ಕೆಲವರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಚಿಂತನೆ ಯಡಿಯೂರಪ್ಪರದ್ದಾಗಿದೆ.
ಮೂರು ಆಯಾಮದ ಅವಲೋಕನ
ಮೂರು ಆಯಾಮದಲ್ಲಿ ಅವಲೋಕನ ನಡೆಸಿ ಸಂಪುಟ ಪುನಾರಚನೆ ನಡೆಸಲಾಗುತ್ತದೆ. ಅಸಮರ್ಥರನ್ನು ಕೈಬಿಡುವುದು, ಯುವಕರು, ಹೊಸ ಮುಖಗಳಿಗೆ ಮಣೆ ಹಾಕುವುದು ಹಾಗು ಭವಿಷ್ಯದ ಚುನಾವಣಾ ದೃಷ್ಟಿಯಿಂದ ಕೆಲವರನ್ನು ಸಂಪುಟದಿಂದ ಬಿಟ್ಟು ಸಂಘಟನೆಗೆ ಬಳಸಿಕೊಳ್ಳುವ ಚಿಂತನೆ ನಡೆಸಲಾಗಿದೆ.
ಸದ್ಯ ಕೆಲ ಸಚಿವರ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲ, ಎಲ್ಲಾ ಸಚಿವರಿಗೆ ವರ್ಷದ ಪ್ರಗತಿ ಕುರಿತು 'ಸಾಧನಾ ಹೊತ್ತಿಗೆ' ಪ್ರಕಟಿಸಲು ತಿಳಿಸಿದ್ದರು. ಆದರೆ ಕೆಲವರು ಮಾತ್ರ ಹೊತ್ತಿಗೆ ಹೊರತಂದಿದ್ದು ಮತ್ತೆ ಕೆಲವರು ತಂದಿಲ್ಲ. ಕೋವಿಡ್ ಮೊದಲ ಅಲೆ ಮತ್ತು ಎರಡನೇ ಅಲೆ ವೇಳೆ ಸರಿಯಾಗಿ ಇಲಾಖಾ ಕೆಲಸ ನಿಭಾಯಿಸಲು ಕೆಲವರು ವಿಫಲರಾಗಿದ್ದಾರೆ. ಇದೆಲ್ಲವನ್ನೂ ಗಮನಿಸಿ ಇಲಾಖೆಯಲ್ಲಿ ಕನಿಷ್ಠ ಸಾಧನೆ ತೋರಿರುವ ಕೆಲ ಸಚಿವರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲಾಗಿದೆ. ನಾಲ್ಕೈದು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಮಣೆ ಹಾಕಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ವಿಫಲಗೊಂಡಿದ್ದರೆ ಅದಕ್ಕೆ ನೇರ ಹೊಣೆ ನರೇಂದ್ರ ಮೋದಿ: ಸಿದ್ದರಾಮಯ್ಯ
2023ಕ್ಕೆ ರಾಜ್ಯದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಾಗಲಿದ್ದು, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಹಾಗಾಗಿ ಕೆಲವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಚಿಂತನೆ ಇದೆ. ಇತ್ತೀಚೆಗೆ ಸಿ.ಟಿ ರವಿ ಅವರನ್ನು ಸಂಪುಟದಿಂದ ಕೈಬಿಟ್ಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಿ ಸಂಘಟನೆಗೆ ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ ಸಂಘಟನಾ ಚುತರರನ್ನು ಮೋದಿ ಸಂಪುಟದಿಂದ ಕೈಬಿಟ್ಟ ರೀತಿಯಲ್ಲೇ ರಾಜ್ಯ ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆ ಜವಾಬ್ದಾರಿ ನೀಡಲಾಗುತ್ತದೆ ಎನ್ನಲಾಗುತ್ತಿದೆ.
ಆಕಾಂಕ್ಷಿಗಳು ಯಾರ್ಯಾರು?
ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ನಾಯಕತ್ವ ಬದಲಾವಣೆ ಪರ ದನಿ ಎತ್ತಿದ್ದು ಅವರಿಗೆ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಕಷ್ಟ ಎನ್ನಲಾಗುತ್ತಿದೆ. ಆದರೆ ಕಾರ್ಕಳ ಶಾಸಕ ಸುನೀಲ್ ಕುಮಾರ್, ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಅಧ್ಯಕ್ಷ ರಾಜುಗೌಡ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕುಡುಚಿ ಶಾಸಕ ಪಿ. ರಾಜೀವ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ಮೋದಿ ರೀತಿಯಲ್ಲಿಯೇ ಯಡಿಯೂರಪ್ಪ ಸಂಪುಟ ಪುನಾರಚನೆಗೆ ಚಿಂತನೆ ನಡೆಸಿದ್ದು, ರಾಜ್ಯ ಬಿಜೆಪಿ ಸರ್ಕಾರದ ಎರಡನೇ ವರ್ಷಾಚರಣೆ ವೇಳೆ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದ್ದು, ಯಾರಿಗೆ ಕೊಕ್, ಯಾರಿಗೆ ಅವಕಾಶ ಎಂದು ಕಾದು ನೋಡಬೇಕಿದೆ.