ಬೆಂಗಳೂರು: ಕರ್ನಾಟಕ ರಾಜ್ಯವು ಪರಿಸರದ ಕಾಳಜಿಯ ಜವಾಬ್ದಾರಿಯನ್ನು ಹೊಂದಿದ್ದು, ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಪರಿಸರಾತ್ಮಕ ಅಂಶಗಳು ಸೇರಿರುವುದನ್ನು ಅಳೆಯಲು ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಿಂದ ಹಸಿರು ಸೂಚಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ರಾಜ್ಯ ಬಜೆಟ್ನಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿರುವ ಶೋಲಾ ಅರಣ್ಯಗಳನ್ನು ಸರ್ವೇಕ್ಷಣೆ ಮಾಡಿ ಇಲ್ಲಿನ ಜೀವ ವೈವಿಧ್ಯತೆಯನ್ನು ಕಾಪಾಡಿ ಸಂರಕ್ಷಿಸಲು 5 ಕೋಟಿ ರೂ.ಗಳ ಅನುದಾನ, ಅಳಿವಿನಂಚಿನ ವನ್ಯಜೀವಿ ಪ್ರಭೇದಗಳ ಸಂರಕ್ಷಣೆಗೆ ಅಗತ್ಯ ಕ್ರಮ, ಶಿವಮೊಗ್ಗ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿರುವ ಮಿನಿ ಮೃಗಾಲಯವನ್ನು ಉನ್ನತೀಕರಿಸಲು 5 ಕೋಟಿ ರೂ.ಗಳ ಅನುದಾನವನ್ನು ಬಜೆಟ್ ಮೂಲಕ ನೀಡಲಾಗಿದೆ.
ರಾಮನಗರ ಜಿಲ್ಲೆಯ ರಣಹದ್ದು ಧಾಮದಲ್ಲಿ ಸಂತಾನೋತ್ಪತ್ತಿ ಕೇಂದ್ರವನ್ನು 2 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ, ಮಂಗಗಳ ಪುನರ್ವಸತಿಗಾಗಿ 5 ವರ್ಷಗಳಿಗೆ ಒಟ್ಟಾರೆ 6.25 ಕೋಟಿ ರೂ, ರಾಜ್ಯದ ಮೊದಲ ಕಡಲಧಾಮವನ್ನು (marine eco park) ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲು ಆಯವ್ಯಯದಲ್ಲಿ ವಿಶೇಷ ಒತ್ತು ನೀಡಲಾಗಿದೆ.
2020-21ನೇ ಸಾಲಿನಲ್ಲಿ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ ಒಟ್ಟಾರೆಯಾಗಿ 4,552 ಕೋಟಿ ರೂ.ಗಳನ್ನು ಒದಗಿಸಲಾಗಿದೆ.