ಬೆಂಗಳೂರು : ಬ್ರಾಹ್ಮಣ ಅರ್ಚಕರು, ಪುರೋಹಿತರನ್ನು ವಿವಾಹವಾಗಲು ಯುವತಿಯರನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ 'ಮೈತ್ರಿ' ಹೆಸರಿನ ವಿನೂತನ ಯೋಜನೆ ಜಾರಿಗೆ ತಂದಿದೆ.
ಅರ್ಚಕರು ಹಾಗೂ ಪುರೋಹಿತರನ್ನು ವಿವಾಹವಾಗುವ ಬ್ರಾಹ್ಮಣ ಯುವತಿಯರಿಗೆ ₹3 ಲಕ್ಷ ಮೊತ್ತದ ಬಾಂಡ್ ನೀಡಲಾಗುತ್ತದೆ. ಪ್ರಸಕ್ತ ವರ್ಷ 30 ಅರ್ಚಕರು ಹಾಗೂ ಪುರೋಹಿತರನ್ನು ವಿವಾಹವಾಗುವ ಯುವತಿಯರಿಗೆ ಮೈತ್ರಿ ಯೋಜನೆಯಡಿ ಬಾಂಡ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಸಿಗುವ ಅನುದಾನ ಆಧರಿಸಿ ಈ ಸಂಖ್ಯೆ ಹೆಚ್ಚಿಸುವ ಉದ್ದೇಶವಿದೆ ಎಂದು ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ...ವೈದ್ಯಕೀಯ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯಾದ್ಯಂತ ಅಂಧತ್ವ ನಿವಾರಣೆ ಕಾರ್ಯಕ್ರಮ: ಸಚಿವ ಸುಧಾಕರ್
ರಾಜ್ಯದ ವಿವಿಧ ಜಿಲ್ಲೆಗಳಿಗೆ ಕಳೆದ ಒಂದು ವರ್ಷದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಬ್ರಾಹ್ಮಣ ಯುವಕರನ್ನು ಅದರಲ್ಲೂ ಪ್ರಮುಖವಾಗಿ ವೃತ್ತಿಯಲ್ಲಿ ತೊಡಗಿದವರನ್ನು ವಿವಾಹವಾಗುವವರ ಸಂಖ್ಯೆ ಬಹಳ ಕಡಿಮೆ. ಅವರನ್ನು ಯವತಿಯರು ವಿವಾಹವಾಗಲು ಉತ್ತೇಜಿಸಲು ಮೈತ್ರಿ ಯೋಜನೆ ಜಾರಿಗೆ ತರಲಾಗಿದೆ. ಇದು ಸರ್ಕಾರದ ಅನುದಾನದಿಂದ ನಡೆಯುತ್ತಿದೆಯೇ ಹೊರತು ಸರ್ಕಾರ ಘೋಷಿಸಿದ ಯೋಜನೆಯಲ್ಲ ಎಂದು ವಿವರಿಸಿದ್ದಾರೆ.
ಅರ್ಚಕರನ್ನು ವಿವಾಹವಾಗುವ ಯುವತಿಯರ ಜೀವನ ಭದ್ರತೆಗೆ ಮೈತ್ರಿ ಯೋಜನೆ ರೂಪಿಸಲಾಗಿದೆ. ಕೆಲವು ಷರತ್ತುಗಳ ಆಧಾರದ ಮೇಲೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿಯಂತೆ 3 ವರ್ಷದವರೆಗೂ ನೀಡಲಾಗುವುದು. ಮುಂದಿನ ವರ್ಷ ಈ ಯೋಜನೆಯನ್ನು 500 ಮಂದಿಗೆ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ವರ್ಷ ರಾಜ್ಯ ಸರ್ಕಾರ ನೀಡಿದ ಅನುದಾನದಲ್ಲಿ ಯೋಜನೆ ಆರಂಭಿಸಿದ್ದೇವೆ. ಪ್ರಸಕ್ತ ಸಾಲಿನ ಬಜೆಟ್ ಸಿದ್ಧತೆಯನ್ನು ಸಿಎಂ ಆರಂಭಿಸಿದ್ದು, ನಮ್ಮ ಬೋರ್ಡ್ ಮೀಟಿಂಗ್ನಲ್ಲಿ ಚರ್ಚೆ ನಡೆಸಿ, ಸರ್ಕಾರಕ್ಕೆ ಅನುದಾನದ ಬೇಡಿಕೆ ಸಲ್ಲಿಸಲು ತೀರ್ಮಾನ ಕೈಗೊಂಡಿದ್ದೇವೆ. ₹297 ಕೋಟಿಯಷ್ಟು ಅನುದಾನದ ಅಗತ್ಯವಿದೆ ಎಂಬ ಮಾಹಿತಿಯನ್ನು ಸಿಎಂಗೆ ಸಲ್ಲಿಸುತ್ತೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದಿಸುವ ವಿಶ್ವಾಸವಿದೆ ಎಂದರು.
ಬಡ ಬ್ರಾಹ್ಮಣ ಹೆಣ್ಣು ಮಕ್ಕಳ ವಿವಾಹಕ್ಕೆ ಮಾಂಗಲ್ಯ ಭಾಗ್ಯ ಕಲ್ಪಿಸಲು ₹25 ಸಾವಿರ ನೆರವು ನೀಡುವ 'ಅರುಂಧತಿ ಯೋಜನೆ’ಯನ್ನು ಸಹ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಾರಿಗೆ ತಂದಿದೆ. 300 ಯುವತಿಯರಿಗೆ 'ಅರುಂಧತಿ' ಯೋಜನೆ ನೆರವು ದೊರೆಯಲಿದೆ. ಬ್ರಾಹ್ಮಣ ಸಮುದಾಯದಲ್ಲಿ ವಿವಾಹದ ಸಮಸ್ಯೆಯ ಜೊತೆಗೆ ಸಾಕಷ್ಟು ಕಡೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಇನ್ನಷ್ಟು ಸಹಾಯ : ಬ್ರಾಹ್ಮಣರ ಮಕ್ಕಳಿಗೆ ವೇದ ಕಲಿಸಲು ದೇವತಾರ್ಚನೆ, ಸ್ವಯಂ ಉದ್ಯೋಗ ಕೈಗೊಳ್ಳಲು ₹25 ಸಾವಿರದಿಂದ ₹7.50 ಲಕ್ಷದವರೆಗೂ ಸಾಲ, ಶೇ.20ರಷ್ಟು ಸಬ್ಸಿಡಿ ನೀಡುವ 'ಪುರುಷೋತ್ತಮ' ಯೋಜನೆ ಜಾರಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಹಲವು ಯೋಜನೆಗಳು ಜಾರಿಗೆ ಬರಲಿವೆ. ಈ ಮೇಲಿನ ಎಲ್ಲಾ ಯೋಜನೆಗಳಿಗೆ ಫೆಬ್ರುವರಿ 20ರೊಳಗೆ ಅನುದಾನ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.