ಬೆಂಗಳೂರು:ನೆರೆ ಪರಿಹಾರ ಕಾರ್ಯಕ್ಕೆ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಧಿವೇಶನವನ್ನು ಮೂರೇ ದಿನಕ್ಕೆ ಮುಗಿಸಿದ್ದ ಬಿಜೆಪಿ ಇದೀಗ ನೆರೆ ಸಂತ್ರಸ್ತರನ್ನು ಮರೆತು ನೆರೆ ರಾಜ್ಯದಲ್ಲಿ ಪಕ್ಷ ಗೆಲ್ಲಿಸಲು ಹೊರಟಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಅಶ್ವತ್ಥ್ ನಾರಾಯಣ ತೆರಳುತ್ತಿದ್ದಾರೆ. ಒಂದ್ಕಡೆ ರಾಜ್ಯದಲ್ಲಿ ನೆರೆ ಬಂದು ಜನ ಇನ್ನೂ ಆ ಸಂಕಷ್ಟದಿಂದ ಪಾರಾಗಿಲ್ಲ. ಅಧಿವೇಶನ ನಡೆಸೋದಕ್ಕೆ ಬಿಜೆಪಿ ಸರ್ಕಾರ ಸಮಯವಿಲ್ಲ. ತರಾತುರಿಯಲ್ಲಿ 3 ದಿನ ಅಧಿವೇಶನ ಶಾಸ್ತ್ರ ಮುಗಿಸಿದ್ದ ಬಿಜೆಪಿ ನಾಯಕರು, ಈಗ ನೋಡಿದ್ರೇ ಉಪಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಚುನಾವಣಾ ಪ್ರಚಾರ ಮತ್ತು ದೇಗುಲ ದರ್ಶನದ್ದೇ ಚಿಂತೆಯಾಗಿದೆ.
ಅಕ್ಟೋಬರ್ 14ರಿಂದ ಮೂರು ದಿನಗಳ ಕಾಲ ಮುಂಬೈನಲ್ಲಿ ಅಶ್ವತ್ಥ್ ನಾರಾಯಣ್ ಪ್ರಚಾರ ನಡೆಸಲಿದ್ದಾರೆ. ಲಕ್ಷ್ಮಣ ಸವದಿ ಇಂದು ಸಾಂಗ್ಲಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಇದರ ನಡುವೆ ನಾಳೆಯಿಂದ ಎರಡು ದಿನ ಯಡಿಯೂರಪ್ಪ ತೆರಳಲಿದ್ದಾರೆ.
ಭಾನುವಾರ ಕುಟುಂಬ ಸಮೇತ ಭದ್ರಾಚಲಂಗೆ ತೆರಳಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ರಾಜ್ಯದ ನೆರೆ ಸಂತ್ರಸ್ತರ ಕಣ್ಣೀರು ಒರೆಸುವುದಕ್ಕಿಂತ ಪಕ್ಕದ ರಾಜ್ಯದ ಚುನಾವಣಾ ಪ್ರಚಾರ ಮತ್ತು ಟೆಂಪಲ್ ರನ್ಗೆ ಮೊದಲ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.