ಬೆಂಗಳೂರು: ನಾಳೆಯಿಂದ ಕಠಿಣ ನಿಯಮ ಜಾರಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಾಕ್ಡೌನ್ ಪದ ಬಳಕೆಗೆ ಮೀನಾಮೇಷ ಎಣಿಸಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಳೆಯಿಂದ 14 ದಿನ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ಆದರೆ ಬಿ.ಎಸ್. ಯಡಿಯೂರಪ್ಪ ಅವರು ನಾಳೆಯಿಂದ ಕಠಿಣ ನಿಯಮ ಜಾರಿ ಎಂದಷ್ಟೇ ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲಾಕ್ಡೌನ್ ಇದೆ. ಇನ್ನು ನಾಳೆಯಿಂದ ಕಠಿಣ ನಿಯಮ ಎನ್ನುತ್ತಿದ್ದಾರೆ. ಲಾಕ್ಡೌನ್ ಎಂದು ಹೇಳಲು ಮೀನಾಮೇಷ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಅಧಿಕೃತವಾಗಿ ಲಾಕ್ಡೌನ್ ಎಂದರೆ ಜನಸಾಮಾನ್ಯರಿಗೆ ನೆರವು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಲಾಕ್ಡೌನ್ ಬದಲಿಗೆ ಕೊರೊನಾ ಕರ್ಫ್ಯೂ, ಕೋವಿಡ್ ಕರ್ಫ್ಯೂ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಹಿಂಬಾಗಿಲ ಮೂಲಕ ಕರ್ಫ್ಯೂ ಹೆಸರಲ್ಲಿ ಲಾಕ್ಡೌನ್ ಹೇರುತ್ತಿದೆ. ಇಡೀ ರಾಜ್ಯ ಬಂದ್ ಮಾಡುವ ನಿರ್ಧಾರಕ್ಕೆ ಲಾಕ್ಡೌನ್ ಎಂದು ಹೇಳಲು ಸಮಸ್ಯೆ ಏನು.? ಎಂದು ಸರ್ಕಾರಕ್ಕೆ ಕೇಳಿದ್ದಾರೆ.
ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಅನ್ನುವುದಾದರೆ ಇದು ಲಾಕ್ಡೌನ್ ಅಲ್ಲದೇ ಕಠಿಣ ನಿಯಮ ಹೇಗಾಗುತ್ತದೆ..? ಲಾಕ್ಡೌನ್ನಿಂದ ಬಡವರಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಎಲ್ಲ ಅರ್ಹರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸುವಂತೆ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ. ಲಾಕ್ಡೌನ್ ಅಂದರೆ ಗೃಹ ಬಂಧನವಿದ್ದಂತೆ. ಜೈಲಿಗೆ ಹೋದವರಿಗೆ ಊಟ, ಸಂಬಳ ಕೊಡುವಂತೆ ಲಾಕ್ಡೌನ್ನಿಂದ ಗೃಹಬಂಧನದಲ್ಲಿರುವ ಬಡವರಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರು ಸೇರಿದಂತೆ ಎಲ್ಲ ಅರ್ಹರಿಗೆ ಈ ಕೂಡಲೇ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಎಸ್ ಆರ್ ಪಾಟೀಲ್ ಹೇಳಿದ್ದಾರೆ.