ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಆರೋಪ ಕುರಿತು ವಿಶೇಷ ತನಿಖಾ ಸಮಿತಿಯಿಂದ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಆರ್‌ಟಿನಗರದಲ್ಲಿರುವ ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಬೆಂಗಳೂರು ಸ್ಫೋಟ ಪ್ರಕರಣದ ರೂವಾರಿ ನಾಸಿರ್ಗೂ ರಾಜಾತಿಥ್ಯ ನೀಡಿರುವ ವಿಚಾರದ ಬಗ್ಗೆ ಅಧಿಕಾರಿಗಳನ್ನು ಕರೆದು ಕೇಳಿದ್ದೇನೆ, ನಾಸಿರ್ಗೆ ರಾಜಾತಿಥ್ಯ ನೀಡಿದ ವಿಚಾರವನ್ನು ಪೊಲೀಸರು ನಿರಾಕರಿಸಿದ್ದಾರೆ.
ಇತ್ತೀಚೆಗೆ ಆ ರೀತಿ ಏನೂ ನಡೆದಿಲ್ಲ ಅಂದಿದ್ದಾರೆ. ಹಳೆಯ ಫೋಟೋಗಳು ಹರಿದಾಡುತ್ತಿವೆ ಅಂತಾ ಹೇಳಿದ್ದಾರೆ. ಆದರೂ ಸಮಗ್ರ ವಿಚಾರಣೆ ಮಾಡಿ ವರದಿ ಕೊಡಲು ಹೇಳಿದ್ದೇನೆ. ವಿಶೇಷ ತನಿಖಾ ಸಮಿತಿ ನೇಮಿಸಿ ಇವತ್ತು ಆದೇಶ ಹೊರಡಿಸಲಾಗಿದೆ. ವಿಶೇಷ ತನಿಖಾ ಸಮಿತಿಯಿಂದ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ದರ್ಪ ತೋರಿದ ಶಾಸಕ ಕುಮಾರಸ್ವಾಮಿ
ರಾತ್ರಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಶಾಸಕರ ಭವನಕ್ಕೆ ಬರುವಾಗ ಅವರನ್ನು ಒಬ್ಬ ಕಾನ್ಸ್‌ಟೇಬಲ್ ತಡೆದಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿದೆ. ನಮ್ಮ ಪೊಲೀಸರನ್ನು ಕುಮಾರಸ್ವಾಮಿ ಬಳಿ ಮಾಹಿತಿ ಪಡೆಯಲು ಕಳುಹಿಸಿದ್ದೇನೆ. ಇವರಿಂದಲೂ ಕಾನ್ಸ್ಟೇಬಲ್ಗೆ ದೌರ್ಜನ್ಯ ಆಗಿದೆ ಅನ್ನೋ ಮಾಹಿತಿಯೂ ಬಂದಿದೆ.
ಇದರಲ್ಲಿ ಏನಾಗಿದೆ ಅಂತಾ ಮಾಹಿತಿ ಪಡೆಯುತ್ತೇನೆ. ಕುಮಾರಸ್ವಾಮಿ ಯಾರು ಅಂತಾ ಗೊತ್ತಿಲ್ಲದೇ ಕಾನ್ಸ್‌ಟೇಬಲ್ ತಡೆದಿದ್ದಾರಂತೆ. ಎಲ್ಲಾ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುತ್ತದೆ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ