ಬೆಂಗಳೂರು : ಆರೋಗ್ಯ ಸಚಿವರ ಉತ್ತರದಿಂದ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಖಂಡ್ರೆ ಅವರು ಸದನದ ಬಾವಿಗಳಿದಿದ್ದಕ್ಕೆ ಗರಂ ಆದ ಸ್ಪೀಕರ್, ಏರುಧ್ವನಿಯಲ್ಲಿ ಮಾತನಾಡಿದ್ರೆ ಹೆದರಲ್ಲ ಎಂದು ಹೇಳಿದ ಘಟನೆ ವಿಧಾನಸಭೆ ಕಲಾಪದಲ್ಲಿ ನಡೆಯಿತು.
ಶೂನ್ಯ ವೇಳೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿ ಕೊರತೆ ಬಗ್ಗೆ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಡಾ.ಕೆ ಸುಧಾಕರ್, ಬ್ಲಾಕ್ ಫಂಗಸ್ 3,900 ಮಂದಿಗೆ ಈವರೆಗೂ ಧೃಡಪಟ್ಟಿದೆ. ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡ್ತಿದ್ದೇವೆ. ಇದು ಅತ್ಯಂತ ದುಬಾರಿ ಚಿಕಿತ್ಸೆ. ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ತೆಗೆದುಕೊಂಡ ನಿರ್ಧಾರ. ಬೀದರ್‌ನಲ್ಲೂ ಸಹ ಚಿಕಿತ್ಸೆ ಕೊಡ್ತಿದ್ದೇವೆ. ಹೆಚ್ಚುವರಿ ಗುಳಿಗೆ ಮತ್ತು ಔಷಧಿಗೆ ಆರ್ಡರ್ ಮಾಡಿದ್ದೇವೆ. ಬಂದ ತಕ್ಷಣ ಗುಳಿಗೆಯನ್ನ ಬೀದರ್‌ಗೆ ಕಳುಹಿಸಿಕೊಡುತ್ತೇವೆ ಎಂದರು.
ಇದಕ್ಕೆ ಸಮಧಾನಗೊಳ್ಳದ ಖಂಡ್ರೆ, ಸಚಿವರು ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಪಷ್ಟನೆ ನೀಡಿ ಎಂದು ಈಶ್ವರ್ ಖಂಡ್ರೆ, ರಾಜಶೇಖರ ಪಾಟೀಲ್, ಡಾ. ಯತೀಂದ್ರ ಸಿದ್ದರಾಮಯ್ಯ, ಅಜಯ್ ಸಿಂಗ್ ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಈ ವೇಳೆ ಗರಂ ಆದ ಸ್ಪೀಕರ್, ಏರುಧ್ವನಿಯಲ್ಲಿ ಮಾತನಾಡಿದ್ರೆ ಹೆದರಲ್ಲ. ನಮಗೂ ದೇವರು ಬಾಯಿ ಕೊಟ್ಟಿದ್ದಾನೆ. ಏನಾದರೂ ಹೇಳಿದ್ರೆ ನಿಮ್ಮ ಚೇರ್‌ಗೆ ಹೋಗಿ ಮಾತನಾಡಿ ಎಂದು ಸ್ಪೀಕರ್ ಗರಂ ಆದರು. ಏನು ಮಾತನಾಡುತ್ತಿದ್ದೀರಿ, ಧ್ವನಿ ದೊಡ್ಡದಿದೆ ಎಂದು ಮಾತನಾಡಿದರೆ ನಮಗೂ ಧ್ವನಿ ದೊಡ್ಡದಿಲ್ವಾ?. ಕುಸ್ತಿ ಅಖಾಡಕ್ಕೆ ಬಂದಿದ್ದೀರಾ? ಸ್ವಲ್ಪ ಸಮಾಧಾನದಿಂದ ಇರಿ ಎಂದು ತಾಕೀತು ಮಾಡಿದರು.
ಡೆಂಗ್ಯೂ ಜ್ವರಕ್ಕೆ ಬೆಡ್ ವ್ಯವಸ್ಥೆ ಮಾಡಿದ್ದೇವೆ : ಡೆಂಗ್ಯೂ ಜ್ವರಕ್ಕೆ ಒಳಗಾದ ಮಕ್ಕಳಿಗೆ ಬೆಡ್ ವ್ಯವಸ್ಥೆ ಬಗ್ಗೆ ಶೂನ್ಯ ವೇಳೆಯಲ್ಲಿ ಬಸವನಗೌಡ ದದ್ದಲ್ ವಿಷಯ ಪ್ರಸ್ತಾಪಿಸಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ದನಿಗೂಡಿಸಿದರು. ಡೆಂಗ್ಯೂ ಜ್ವರಕ್ಕೆ ಸಾಕಷ್ಟು ಮಕ್ಕಳು ಒಳಗಾಗಿದ್ದಾರೆ. ಮಕ್ಕಳಿಗಾಗಿ ಎಷ್ಟು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಕೆ ಸುಧಾಕರ್, ರಿಮ್ಸ್ ಜಿಲ್ಲಾಸ್ಪತ್ರೆಗಳಲ್ಲಿ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲೂ ಕೂಡ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಕಳೆದ ವಾರ ಒಂದೆರಡು ಪ್ರಕರಣಗಳಲ್ಲಿ ಸಮಸ್ಯೆ ಆಗಿತ್ತು. ಅದನ್ನು ತಿಳಿದ ನಂತರ ಬೇರೆ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯವಸ್ಥೆ ಮಾಡುತ್ತೇವೆ ಎಂದರು.