ಭಾರತೀಯ ತಾರೆಗಳಿಗೂ ವಿವಾದಗಳಿಗೆ ಬಿಡಿಸದ ನಂಟು. ಆದರೆ, ಎಸ್‍ಪಿಬಿ ವಿವಾದಗಳಿಂದ ಬಹುದೂರ ನಿಲ್ಲುತ್ತಾರೆ. ಅಕಸ್ಮಾತ್ ಯಾವುದೇ ಒಂದು ವಿಚಾರ ತೆಗೆದುಕೊಂಡ ಮೇಲೆ ಅದನ್ನು ತಾತ್ವಿಕ ಅಂತ್ಯದವರೆಗೂ ತೆಗೆದುಕೊಂಡು ಹೋಗುವುದು ಇವರ ನಡವಳಿಕೆ.
ಕೋಲ್ಕತ್ತಾದಲ್ಲಿ ಅಮಿತಾಬ್ ಬಚ್ಚನ್ ರಾಷ್ಟ್ರಗೀತೆ ಹಾಡಲು ನಿಗದಿತ ಅವಧಿಗಿಂತ ಜಾಸ್ತಿ ಸಮಯ ತೆಗೆದುಕೊಂಡರೆಂದು ‘ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ’ ಹೂಡಿದ್ದರು. ಇದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ವಿರುದ್ಧ ಎಸ್‍ಪಿಬಿ ತಮ್ಮ ಮನದ ಮಾತು ಹರಿಬಿಟ್ಟು “ಆ ದಿನ ಕೋಲ್ಕತ್ತಾದಲ್ಲಿ ಅಮಿತಾಬ್ ಹಾಡಿದ ರಾಷ್ಟ್ರಗೀತೆ ಕೇಳಿ ಭಾವುಕನಾದೆ, ಅವರು ಹಾಡಿದ ರೀತಿ, ಉಚ್ಚಾರಣೆ, ಧ್ವನಿಯ ಏರಿಳಿತ, ಎಲ್ಲವೂ ಘನತೆ ತರುವಂತಿತ್ತು. ಯಾರೋ ಕೆಲವರು ಅಮಿತಾಬ್ ರಾಷ್ಟ್ರಗೀತೆ ಹಾಡಲು ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಕಾನೂನು ಇದೆಯಾ? ನನಗೆ ಆಶ್ಚರ್ಯ. ಹಾಗಾದರೆ ಲತಾ ಮಂಗೇಶ್ಕರ್, ಭೀಮಸೇನ ಜೋಶಿ, ಬಾಲಮುರಳಿ ಕೃಷ್ಣ ಹಾಗೂ ನಾನೂ ಸೇರಿದಂತೆ ಇನ್ನೂ ಅನೇಕರು ರಾಷ್ಟ್ರಗೀತೆ ಹಾಡಿದ್ದಾಗ ಯಾಕೆ ಯಾರೂ ರಾಷ್ಟ್ರಗೀತೆ ಹಾಡಲು ನಿಗದಿತ ಸಮಯ ಇದೆ ಎಂಬುದನ್ನು ಹೇಳೇ ಇಲ್ಲ. ನ್ಯಾಯಾಧೀಶರುಗಳು ಈಗ ತಮ್ಮ ಮುಂದಿರುವ ಪ್ರಕರಣಗಳನ್ನು ಅಂತಿಮಗೊಳಿಸಲು ಸಮಯ ಸಾಲದೆ ಒದ್ದಾಡುತ್ತಿದ್ದಾರೆ. ಈ ಮಧ್ಯೆ ಅವರ ಕೊರಳಿಗೆ ಇನ್ನೂ ಒಂದು ಪ್ರಕರಣವನ್ನು ತಗುಲಿ ಹಾಕಬೇಕೇ?
ದೇಶದ ಮುಂದೆ ಬೇಕಾದಷ್ಟು ಸಮಸ್ಯೆಗಳಿವೆ. ಸಾಧ್ಯವಾದರೆ ಅವುಗಳನ್ನು ಬಗೆಹರಿಸಲು ಸಹಾಯ ಮಾಡೋಣ. ಪ್ರಚಾರಕ್ಕಾಗಿ ಕ್ಷುಲ್ಲಕ ವಿಷಯಗಳನ್ನು ಎತ್ತಿಕೊಳ್ಳುವುದು ಬೇಡ. ನಾವು ವಿಶಾಲ ಮನಸ್ಸು ಇಟ್ಟುಕೊಳ್ಳೋಣ. ಅಮಿತಾಬ್ ಬಚ್ಚನ್ ರಾಷ್ಟ್ರಗೀತೆ ಹಾಡಿದ್ದು ಕೇಳಿ ನಿಜಕ್ಕೂ ನನಗೆ ಹೆಮ್ಮೆ ಅನಿಸಿತು ಹ್ಯಾಟ್ಸ್ ಆಫ್ ಟು ಯು ಸರ್” ಎಂದು ಎಸ್‍ಪಿಬಿ ಹೇಳಿದ ಮೇಲೆ ವಿವಾದ ಬಹುತೇಕ ಇತಿಶ್ರೀ ಹಂತ ತಲುಪಿತು. ದೇಶದ ವಾಸ್ತವ ಸ್ಥಿತಿಯೆಡೆಗೆ ಬೆರಳು ತೋರಿಸಿ, ಜಟಿಲ ವಿವಾದವನ್ನು ಸೂಕ್ಷ್ಮವಾಗಿ ವಿವರಿಸುತ್ತಾ ಎಸ್‍ಪಿಬಿ ಅಜಾತ ಶತ್ರುವಾಗಿ ವಿರೋಧಿಗಳ ಪ್ರೀತಿಗೆ ಭಾಜನರಾದವರು.