ಬೆಂಗಳೂರು: ಆಸ್ತಿಗಾಗಿ ಸ್ವಂತ ಮಗನೇ ತನ್ನ ಚಿಕ್ಕಪ್ಪನ ಜೊತೆ ಸೇರಿ ಹೆತ್ತ ತಂದೆಯನ್ನೇ ಕೊಲೆ ಮಾಡಿಸಿ ಒಂದು ವರ್ಷದ ಕಾಲ ತಲೆಮರೆಸಿಕೊಂಡಿದ್ದರು. ಆದ್ರೆ ಇಬ್ಬರನ್ನೂ ತಲಘಟ್ಟಪುರ ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳ್ಳಾರಿ ಮೂಲದ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ ಬಂಧಿತರಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ ರಿಯಾಜ್ ಅಬ್ದುಲ್ ಶೇಖ್, ಶಹಬಾಜ್, ಶಾರೂಕ್, ಆದಿಲ್ ಖಾನ್, ಸಲ್ಮಾನ್ ಸೇರಿ ಐವರು ಆರೋಪಿಗಳನ್ನು ಕಳೆದ ವರ್ಷವೇ ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಳ್ಳಾರಿ ಸಿಂಗನಮಲ ಮಾಧವ ಕೊಲೆಯಾದವರು. ಮಾಧವ ಅವರಿಗೆ ಹರಿಕೃಷ್ಣ ಮಗನಾದರೆ ಶಿವರಾಮ್ ಪ್ರಸಾದ್ ತಮ್ಮನಾಗಿದ್ದಾನೆ. ಆಸ್ತಿಯ ವ್ಯಾಮೋಹಕ್ಕಾಗಿ ಮಾಧವ ಅವರ ಕೊಲೆಗೆ ಮಗ ಹರಿಕೃಷ್ಣ ಮತ್ತು ತಮ್ಮ ಶಿವರಾಮ್ ಪ್ರಸಾದ ಸುಪಾರಿ ಕೊಟ್ಟಿದ್ದರು. ಅದರಂತೆ ಕಳೆದ ವರ್ಷ ಫೆ.14ರಂದು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಲಾಳ ರಸ್ತೆಯಲ್ಲಿರುವ ಮನೆಗೆ ಮಾಧವ್ ಹೋಗುವಾಗ ಸುಪಾರಿ ಪಡೆದ ಹಂತಕರು ಪೂರ್ವಸಂಚಿನಂತೆ ಬೈಕ್ ಹಾಗೂ ಆಟೊ ಮೂಲಕ ಹಿಂಬಾಲಿಸಿಕೊಂಡು ಚಾಕುವಿನಿಂದ ಮಾಧವನನ್ನು ಕೊಚ್ಚಿ ಕೊಲೆ ಮಾಡಿದ್ದರು. ಸದ್ಯ ಪ್ರಕರಣ ಸಂಬಂಧ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಒಂದು ವರ್ಷದಿಂದ ನಾಪತ್ತೆಯಾಗಿದ್ದ ಆರೋಪಿಗಳು:
ಆಸ್ತಿ ವ್ಯಾಮೋಹಕ್ಕಾಗಿ ತಂದೆಯ ಹತ್ಯೆಗೆ ಸುಪಾರಿ ಹಂತಕರಿಗೆ ಮಗ 25 ಲಕ್ಷ ರೂಪಾಯಿ ನೀಡಿ ಕೊಲೆ ಮಾಡಿಸಿದ್ದ. ಇದಕ್ಕೆ ಚಿಕ್ಕಪ್ಪ ಶಿವರಾಮ್ ಪ್ರಸಾದ್ ಸಾಥ್ ನೀಡಿದ್ದ. ಬಂಧನ ಭೀತಿಯಿಂದ ಇಬ್ಬರು ಆರೋಪಿಗಳು ತಮಿಳುನಾಡು, ಕೇರಳ ಹಾಗೂ ಗೋವಾದ ಹೊಟೇಲ್ ಲಾಡ್ಜ್ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಸಿಕ್ಕಿಹಾಕಿಕೊಳ್ಳುವ ಭಯದಿಂದ ಮೊಬೈಲ್ ಬಳಸುತ್ತಿರಲಿಲ್ಲ. ತುರ್ತು ಸಮಯದಲ್ಲಿ ಮಾತನಾಡಬೇಕೆಂದರೆ ಅಪರಿಚಿತರಿಂದ ಮೊಬೈಲ್ ಪಡೆದು ಮಾತನಾಡಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದರು. ಟವರ್ ಲೊಕೇಷನ್ ಆಧಾರದ ಮೇಲೆ ಆರೋಪಿಗಳ ಕರೆ ಮಾಡಿದ ಸ್ಥಳಕ್ಕೆ ಶೋಧ ನಡೆಸಿದರೂ ಹಂತಕರ ಸುಳಿವು ಸಿಗುತ್ತಿರಲಿಲ್ಲ. ಬಂಧನ ಭೀತಿಯಿಂದ ಆರೋಪಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಮಾಧವ ಹಲವು ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡ ಪರಿಣಾಮ 100 ಕೋಟಿ ಬೆಲೆ ಬಾಳುವ ಸಾವಿರ ಎಕರೆ ಭೂಮಿ ಖರೀದಿ ಮಾಡಿ ಬಳ್ಳಾರಿ ಸ್ಟೀಲ್, ಅಲೈ ಲಿಮಿಟೆಡ್ ಕಂಪೆನಿಗಳಿಗೆ ಮಾಲೀಕರಾಗಿದ್ದರು. ಕೆಲ ವರ್ಷಗಳಿಂದ ಮೈನಿಂಗ್ ಬಿಸಿನೆಸ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದರು. ಕಂಪೆನಿಯ ನಿರ್ದೇಶಕರಾಗಿದ್ದ ಮಗ ಹರಿಕೃಷ್ಣ ಹಾಗೂ ಮೃತರ ತಮ್ಮ ಶಿವರಾಮ್ ಪ್ರಸಾದ್ ಅವರು ಆಸ್ತಿ ಮಾರಾಟ ಮಾಡುವಂತೆ ಮಾಧವಗೆ ಸಲಹೆ ನೀಡಿದ್ದರು. ಮಗನ ಸಲಹೆಯನ್ನು ತಂದೆ ತಳ್ಳಿಹಾಕಿದ್ದ. ಬಳಿಕ 2014 ರಿಂದಲೇ ತಂದೆಯ ಕೊಲೆಗೆ ಮಗ ಸ್ಕೆಚ್ ಹಾಕಿದ್ದ. ಇದಕ್ಕೆ ಚಿಕ್ಕಪ್ಪ ಸಾಥ್ ನೀಡಿದ್ದ.
ಎರಡು ಬಾರಿ ಕೊಲೆ ಸ್ಕೆಚ್ ಮಿಸ್: 2014 ರಿಂದಲೂ ತಂದೆ ವಿರುದ್ಧ ಹಗೆತನ ಸಾಧಿಸಿಕೊಂಡು ಬಂದಿದ್ದ ಮಗ ಹಾಗೂ ಚಿಕ್ಕಪ್ಪ, ಹೇಗಾದರೂ ಮಾಡಿ ಆಸ್ತಿ ಕಬಳಿಸಬೇಕೆಂದು ಸಂಚು ರೂಪಿಸಿ 2014ರಲ್ಲಿ ಅಪ್ಪನ ವಿರುದ್ಧ ಆ್ಯಸಿಡ್ ಅಟ್ಯಾಕ್ ಮಾಡಿಸಿದ್ದರು. ಸುಪಾರಿ ಕಿಲ್ಲರ್ಗಳು ಜೆ.ಸಿ.ನಗರ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ಯಿಯಲ್ಲಿ ಮಾಧವ ಮೇಲೆ ಅಟ್ಯಾಕ್ ಮಾಡಿದ್ದರೂ ಕೂದಲೆಳೆ ಅಂತರದಿಂದ ಪಾರಾಗಿದ್ದರು. ಕೊಲೆ ಮಾಡಿಸಲು ಮೊದಲ ಎರಡು ಸುಪಾರಿ ತಂಡಗಳು ವಿಫಲವಾಗಿದ್ದರಿಂದ ಮೂರನೇ ಸುಪಾರಿ ತಂಡಕ್ಕೆ 25 ಲಕ್ಷ ನೀಡುವುದಾಗಿ ಹೇಳಿ ಮಾತುಕತೆ ನಡೆಸಿದ್ದರು. ಕೊಲೆ ಮಾಡಲು ರಿಯಾಜ್ ಒಪ್ಪಿಕೊಂಡು ಸಹಚರರಿಗೆ ತಲಾ ಐದು ಲಕ್ಷ ನೀಡುವುದಾಗಿ ಹೇಳಿದ್ದ. ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಉದ್ಯಮಿಯನ್ನು ಹಿಂಬಾಲಿಸಿ ಹರಿತವಾದ ಚಾಕುವಿನಿಂದ ಮಾಧವ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದರು. ಕೊರೊನಾ ನಡುವೆಯೂ ಪಾಂಡಿಚೇರಿ, ಅನಂತಪುರ, ಬಳ್ಳಾರಿ, ಗೋವಾ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.