ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹಣ ಕೊಡಲಿಲ್ಲ ಎಂದು ಸುಪಾರಿ ಕೊಟ್ಟು ಸ್ವಂತ ತಂದೆಯನ್ನೆ ಮಗ ಹತ್ಯೆ ಮಾಡಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಎಂ.ವಿ. ನಗರದ ನಿವಾಸಿ ಪನ್ನೀರ್ ಸೆಲ್ವಂ ಎಂಬುವರನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ, ಅವರ ಮಗ ಪಿ. ರಾಜೇಶ್ ಕುಮಾರ್ ಹಾಗೂ ಪಾರ್ಥಿಬನ್, ಸ್ಟ್ಯಾನ್ಲಿ ಮತ್ತು ಆನಂದ್ ಸುಪಾರಿ ಹಂತಕರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಎಂದು ಮನೆಯಿಂದ ಹೋದ ಪನ್ನೀರ್ ಸೆಲ್ವಂ ಮತ್ತೆ ಮನೆಗೆ ಬಂದಿರಲಿಲ್ಲ. ನಂತರ ಬೆಳಗ್ಗೆ 11.30ಕ್ಕೆ ಯಾರೊ ಕಿಡ್ನಾಪ್ ಮಾಡಿದ್ದಾರೆ ಅಂತಾ ಪೊಲೀಸರ ಬಳಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನ ರಚಿಸಿ ಕಾರ್ಯಾಚರಣೆಗೆ ಮುಂದಾದರು. ತನಿಖೆ ವೇಳೆ ಉದ್ಯಮಿಯ ಮಗ ರಾಜೇಶ್ ತಾನೇ ಗ್ಯಾಂಗ್ ಕಟ್ಟಿಕೊಂಡು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಹೆತ್ತ ತಂದೆಯನ್ನೇ ಹತ್ಯೆ ಮಾಡಲು ಕಾರಣ
ತಮಿಳುನಾಡಿನ ತಿರುಪತ್ತೂರಿನ ಪನ್ನೀರ್, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಸ್ವಂತ ಉದ್ಯಮ ಆರಂಭಿಸಿದ್ದರು. ಇತ್ತೀಚೆಗೆ ಮಗ ರಾಜೇಶ್, ನಿವೇಶನ ಖರೀದಿಗೆ ಹಣ ಕೇಳಿದ್ದ. ಆದರೆ, ತಂದೆ ಕೊಟ್ಟಿರಲಿಲ್ಲ. ಮನೆ ಜವಾಬ್ದಾರಿಯನ್ನು ತನಗೆ ವಹಿಸುವಂತೆ ಮಗ ಪಟ್ಟು ಹಿಡಿದಿದ್ದ. ಈ ಸಂಬಂಧ ಜಗಳ ನಡೆದಿತ್ತು ಎಂದು ಪೊಲೀಸರು ಹೇಳಿದರು.
ತನ್ನ ತಂದೆ ಬೇರೆ ಮಹಿಳೆ ಜೊತೆ ಸಲುಗೆ ಹೊಂದಿದ್ದು, ಆಕೆಗೆ ಹಣ ಹಾಗೂ ಆಭರಣ ನೀಡುತ್ತಿದ್ದಾನೆ ಎಂದು ತಿಳಿದ ಮಗ ಕೊಲೆಗೆ ಸಂಚು ರೂಪಿಸಿದ್ದ. ಆರೋಪಿ ಪಾರ್ಥಿಬನ್‌ನನ್ನು ಸಂಪರ್ಕಿಸಿ, ತಂದೆಯನ್ನು ಕೊಲ್ಲಲು 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. 3 ಲಕ್ಷವನ್ನು ಮುಂಗಡವಾಗಿ ಪಾವತಿಸಿದ್ದ ಎಂದು ಪೊಲೀಸರು ತಿಳಿಸಿದರು.
ಈ ಘಟನೆಗೂ ಮೊದಲು ಮಾರ್ಚ್ 16ರಂದು ಜಯಂತಿ ಮುಖ್ಯರಸ್ತೆಯಲ್ಲಿ ಪನ್ನೀರ್ ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದರು. ಸ್ಥಳೀಯರು ಪನ್ನೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಿದ್ದರು. ಈ ಸಂಬಂಧ ಪ್ರಕರಣ ಸಹ ದಾಖಲಾಗಿತ್ತು ಎಂದು ಪೊಲೀಸರು ಹೇಳಿದರು.
ಪ್ರಕರಣ ಹಿನ್ನೆಲೆ
ತಮಿಳುನಾಡಿನ ಜಾಕ್ ಎಂಬಾತನಿಂದ ವಿಷದ ಮಾತ್ರೆ ತರಿಸಿಕೊಂಡಿದ್ದ ಆರೋಪಿಗಳು, ಅದನ್ನು ಕರಗಿಸಿ ಚುಚ್ಚುಮದ್ದು ಟ್ಯೂಬ್‌ನಲ್ಲಿ ತುಂಬಿದ್ದರು. ಅಪಹರಣಕ್ಕೆಂದು ಕಮ್ಮನಹಳ್ಳಿಯಲ್ಲಿರುವ ವೇಣು ಟ್ರಾವೆಲ್ಸ್‌ನಲ್ಲಿ ಕಾರು ಬಾಡಿಗೆ ಪಡೆದಿದ್ದರು. ದೇವಸ್ಥಾನಕ್ಕೆ ಹೊರಟಿದ್ದ ಮಾಹಿತಿಯನ್ನು ಮಗನಿಂದ ತಿಳಿದುಕೊಂಡ ಆರೋಪಿಗಳು, ಪನ್ನೀರ್ ಅವರನ್ನು ಅಡ್ಡಗಟ್ಟಿ ಅಪಹರಿಸಿ ಕೊಂದಿದ್ದಾರೆ ನಂತರ, ದೇವನಹಳ್ಳಿ, ಹೊಸಕೋಟೆ ಕ್ರಾಸ್ ಎಲ್ಲಾ ಕಡೆ ಸುತ್ತಾಡಿ ಬಳಿಕ ಕೋಲಾರದ ವೇಮಗಲ್ ಬಳಿಯ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.