ಬೆಂಗಳೂರು : ನಗರದ ಪುಸ್ತಕದಂಗಡಿಯೊಂದರಲ್ಲಿ 18 ವರ್ಷದೊಳಗಿನ ಬಾಲಕರಿಗೆ ಸೊಲ್ಯೂಷನ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಲೋಕೇಶ್ ಬಂಧಿತ ಆರೋಪಿ. ಯಶವಂತಪುರದ ಆರ್.ಟಿ.ಓ ಕಚೇರಿ ಬಳಿ ಪುಟ್ಟಪ್ಪ ಹೆಸರಿನ ಪುಸ್ತಕದಂಗಡಿ ಇಟ್ಟುಕೊಂಡಿದ್ದು, ವೈಟ್ನರ್ ಹಾಗೂ ಸೊಲ್ಯೂಷನ್ ಜೊತೆಗೆ ಮಾರಾಟ ಮಾಡುವ ಬದಲು ಪ್ರತ್ಯೇಕವಾಗಿ ಸೊಲ್ಯೂಷನ್ ಮಾರಾಟ ಮಾಡಿ, ದಂಧೆ ನಡೆಸುತ್ತಿದ್ದನು.
ಸಾಮಾನ್ಯವಾಗಿ ವೈಟ್ನರ್ ಅನ್ನು ಅಳಿಸಲು ಬಳಸುತ್ತಾರೆ. ಇದು ಪುಸ್ತಕದ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ. ವೈಟ್ನರ್ ಮತ್ತು ಈ ಸೊಲ್ಯೂಷನ್ ಅನ್ನು ಒಟ್ಟಿಗೆ ಮಾರಾಟ ಮಾಡಬೇಕು. ಅದು 18 ವರ್ಷ ಕೆಳಗಿನ ಬಾಲಕರಿಗೆ ನೀಡಬಾರದು ಎಂಬ ನಿಯಮವಿದೆ. ಎರಡು ಒಟ್ಟಿಗೆ ಇರುವ ವೈಟ್ನರ್ ಮತ್ತು ಅದನ್ನು ಅಳಿಸಲು ಬಳಸುವ ಸೊಲ್ಯೂಷನ್ ಬೆಲೆ 55 ರೂಪಾಯಿ. ಆದರೆ ಹಣದಾಸೆಗೆ ಅಂಗಡಿ ಮಾಲೀಕ ಇದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದನು. ಎರಡನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಮಾರುತ್ತಿದ್ದನು. ಆದರೆ ಈಗ ಮಾಡಿದ ತಪ್ಪಿಗೆ ಜೈಲು ಪಾಲಾಗಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ಸದಾಶಿವ ನಗರ ಪೊಲೀಸರು ರಾಬರಿಗೆ ಯತ್ನಿಸಿದ್ದ ತಬ್ರೇಜ್ ಹಾಗೂ ತೌಸಿಫ್ ನನ್ನ ಅರೆಸ್ಟ್ ಮಾಡಿದ್ದರು. ಈ ವೇಳೆ ಕೃತ್ಯ ನಡೆಯುವ ಮೊದಲು ಇಬ್ಬರು ಸೆಲ್ಯೂಷನ್ ಎಳೆದಿರುವುದು ಗೊತ್ತಾಗಿತ್ತು. ವಿಚಾರಿಸಿದಾಗ ಸುಲಭಯಾಗಿ ಸೊಲ್ಯೂಷನ್ ಸಿಗುವ ಯಶವಂತಪುರ ಆರ್ಟಿಓ ಕಚೇರಿ ಬಳಿ ಇರುವ ಪುಟ್ಟಪ್ಪ ಪುಸ್ತಕದ ಅಂಗಡಿ ಹೆಸರು ಹೇಳಿದ್ದರು. ಮಾಹಿತಿ ಸಂಗ್ರಹಿಸಿ ಕಾದು ಕುಳಿತಿದ್ದ ಸದಾಶಿವನಗರ ಪೊಲೀಸರು 10ನೇ ತರಗತಿ ಬಾಲಕನಿಗೆ ಸೊಲ್ಯೂಷನ್ ನೀಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದರು. ಅಂಗಡಿ ಮಾಲೀಕನನ್ನು ಬಂಧಿಸಿದ್ದು, 2ಕ್ಕೂ ಹೆಚ್ಚು ವೈಟ್ನರ್ ಹಾಗೂ ಸೊಲ್ಯೂಷನ್ ಒಟ್ಟಿಗೆ ಇರುವ ಪ್ಯಾಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಟ್ಟೆಗೆ ಸೊಲ್ಯೂಷನ್ ಹಾಕಿ ಮೂಗಿನ ಬಳಿ ಇಟ್ಟು ಎಳೆಯುತ್ತಿದ್ದ ಯುವಕರು: ವೈಟ್ನರ್ ಹಾಗೂ ಸೊಲ್ಯೂಷನ್ ಒಂದೇ ಪ್ಯಾಕೆಟ್ನಲ್ಲಿರುವುದರಿಂದ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಒಟ್ಟಿಗೆ ಮಾರಬೇಕು. ಆದರೆ ಈತ ವೈಟ್ನರ್ 30 ರೂಪಾಯಿಗೆ ಸೇಲ್ ಮಾಡಿ ಸೊಲ್ಯೂಷನ್ ಮಾತ್ರ ಕೇಳಿ ಕೇಳಿದವರಿಗೆ 60 ರಿಂದ 90 ರೂಪಾಯಿಗೆ ಮಾರಾಟ ಮಾಡ್ತಿದ್ದನು. ಗಾಂಜಾ ಸೇರಿದಂತೆ ಸಿಂಥೆಟಿಕ್ ಡ್ರಗ್ನಂತಹ ಹೈ ಎಂಡ್ ಡ್ರಗ್ ಖರೀದಿ ಮಾಡಲು ಸಾಧ್ಯವಾಗದ ಸ್ಲಂ ಸೇರಿದಂತೆ ಕೆಳವರ್ಗದ ಜನರು ಹಾಗೂ ವಿದ್ಯಾರ್ಥಿಗಳು ಇದೇ ಸೊಲ್ಯೂಷನ್ ಅನ್ನು ಬಟ್ಟೆಗೆ ಹಾಕಿಕೊಂಡು ಮೂಗಿನ ಬಳಿ ಇಟ್ಟು ಎಳೆದು ನಶೆ ತೆಗೆದುಕೊಳ್ಳುತ್ತಿದ್ದರು.
ಹೀಗೆ ಒಮ್ಮೆ ಎಳೆದರೆ ದಿನಪೂರ್ತಿ ನಶೆಯಲ್ಲೇ ಇದ್ದು, ಸಮಾಜಘಾತುಕ ಕೆಲಸದಲ್ಲಿ ಯುವಕರು ತೊಡಗಿಕೊಳ್ಳುತ್ತಿದ್ದರು. ಅಲ್ಲದೇ ಇದಕ್ಕೆ ದಾಸರಾಗುವ ಯುವಕರು ವಾರವಿಡೀ ಊಟವಿಲ್ಲದೇ ಇರುತ್ತಿದ್ದರು. ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ತಬ್ರೇಜ್ ಮತ್ತು ತೌಸಿಫ್ ಊಟ ಮಾಡಿ ವಾರವೇ ಕಳೆದಿತ್ತು. ಆಸ್ಪತ್ರೆಯಲ್ಲಿ ನೀರು ಕುಡಿಸಿದರೂ ವಾಂತಿ ಮಾಡಿಕೊಳ್ಳುವ ಮಟ್ಟಕ್ಕೆ ಸೊಲ್ಯೂಷನ್ಗೆ ದಾಸರಾಗಿಬಿಟ್ಟಿದ್ದರು. ಸದ್ಯ ಆರೋಪಿ ಲೋಕೆಶ್ನನ್ನ ಬಂಧಿಸಿರುವ ಸದಾಶಿವನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ : ಸಕ್ಕರೆನಾಡಿನಲ್ಲಿ ಮತ್ತೆ ಹರಿದ ನೆತ್ತರು.. ಮನೆಗೆ ಹೊರಟಿದ್ದ ಯುವಕನ ತಡೆದು ಬರ್ಬರ ಕೊಲೆ