ಬೆಂಗಳೂರು : ರಾಜಧಾನಿ ಬೆಂಗಳೂರಿಗರಿಗೆ ಬೇಸಿಗೆ ಕಾಲ ಬಂತು ಅಂದರೆ ಸಾಕು ಚಿಂತೆ ಶುರುವಾಗಿ ಬಿಡುತ್ತೆ. ಅದರಲ್ಲೂ ಬೆಂಗಳೂರು ಹೊರವಲಯದವರಿಗಂತೂ ಉರಿಬಿಸಿಲಿನ ಹಿಂಸೆ ಜೊತೆಗೆ ಹಾವಿನ ಭೀತಿ ಶುರುವಾಗಿದೆ.
ಮನೆಯ ಹೊರಗೆ ಬಿಸಿಲ ಧಗೆಯಾದ್ರೆ, ಮನೆಯ ಒಳಗೆ ಹಾವಿನ ಕಾಟ. ಬಾತ್ರೂಂ, ಅಡುಗೆ ಮನೆ, ಪಾತ್ರೆ ತೊಳೆಯುವ ಸಿಂಕ್, ಬಟ್ಟೆ ಒಣಗಿಸಲು ಕಟ್ಟಿದ ದಾರ, ಮನೆಯ ಹಿತ್ತಲು, ಅಷ್ಟೇ ಅಲ್ಲ, ಬೆಡ್ ರೂಮಿಗೂ ನುಗ್ಗುವ ಹಾವಿನಿಂದ ಜನರಿಗೆ ಭೀತಿ ಶುರುವಾಗಿದೆ.
ಬಿಸಿಲ ತೀವ್ರತೆ ಹೆಚ್ಚಾಗುತ್ತಿವೆ. ಹೀಗಾಗಿ, ಹೊರಗೆ ಬರುತ್ತಿರುವ ಹಾವುಗಳು ಮನೆಯೊಳಗಿನ ಮೂಲೆಯೊಳಗೆ ಸೇರಿಕೊಳ್ತಿವೆ. ಹಾವುಗಳ ಕಾಟಕ್ಕೆ ಬೆಂಗಳೂರಿಗರು ಬೆಚ್ಚಿಬಿದ್ದಿದ್ದಾರೆ. ಬಿಬಿಎಂಪಿ ವನ್ಯಜೀವಿ ಸಂರಕ್ಷಕರಿಗೆ ಹಾವು ರಕ್ಷಣೆ ಮಾಡುವುದು ಪೂರ್ಣ ಕೆಲಸವಾಗಿ ಬಿಟ್ಟಿದೆ.
ಪಾಲಿಕೆಯ ಹೆಲ್ಪ್ ಲೈನ್ ನಂಬರ್ಗೆ ಕಳೆದ ಒಂದು ವಾರದಿಂದ ಹಾವು ರಕ್ಷಣೆಗೆಂದು ಬರುವ ಕರೆಗಳು ಹೆಚ್ಚಾಗಿದೆ. ಓರ್ವ ಸ್ವಯಂ ಸೇವಕನಿಗೆ ಏನಿಲ್ಲವೆಂದರೂ 10 ರಿಂದ 15 ಹಾವಿನ ರಕ್ಷಣೆ ಕರೆ ಬರುತ್ತಿದೆ.
ಇದನ್ನೂ ಓದಿ: ಕಬಡ್ಡಿ ಕ್ರೀಡಾಕೂಟ : ಕೋರ್ಟಿಗಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು
ವೈಟ್‌ಫೀಲ್ಡ್, ಮಾರತ್ತಹಳ್ಳಿ, ಹೆಚ್ಬಿಆರ್ ಲೇಔಟ್, ಮಹದೇವಪುರ, ಬಾಣಸವಾಡಿ ಹಾಗೂ ಕೆಆರ್‌ಪುರ, ಪೀಣ್ಯ, ಪ್ರದೇಶಗಳಲ್ಲಿ ಹೆಚ್ಚಾಗಿ ಹಾವುಗಳು ಮನೆಗೆ ನುಗ್ಗುತ್ತಿದೆ. ಮಧ್ಯಾಹ್ನ ಉರಿಬಿಸಿಲಿಗೆ ಹಾವುಗಳು ಹೊರಗೆ ಬರುತ್ತಿದ್ದು, ಮನೆಯಲ್ಲಿರುವವರು ಸ್ವಲ್ಪ ಎಚ್ಚರಿಕೆಯಿಂದ ಓಡಾಡುವುದು ಉತ್ತಮ.
ಕಾರಣ?
- ಹಾವುಗಳು ಹೆಚ್ಚು ತಣ್ಣನೆಯ ಹಾಗೂ ಹೆಚ್ಚು ಬಿಸಿಲಿನ ವಾತಾವರಣದಲ್ಲಿ ಇರುವುದಿಲ್ಲ.
- ಹೀಗಾಗಿ, ಮಧ್ಯಾಹ್ನದ ವೇಳೆ ಸುಡು ಬಿಸಿಲು ಹೆಚ್ಚಾದಾಗ ಹಾವುಗಳು ಹೊರಗೆ ಬರುತ್ತವೆ.
- ಆಶ್ರಯ ಹುಡುಕಿ ಮನೆಯೊಳಗೆ ನುಗ್ಗುತ್ತಿವೆ.
- ಜನರು ಮರಗಿಡಗಳನ್ನು ಕಡಿದು ಎಲ್ಲೆಡೆ ಬೃಹತ್ ಕಟ್ಟಡಗಳನ್ನು ಕಟ್ಟುತ್ತಿರುವುದು ಮತ್ತೊಂದು ಕಾರಣ.