ಬೆಂಗಳೂರು: ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆದ ರಾಸಾಯನಿಕ ಸ್ಫೋಟದಲ್ಲಿ ಒಟ್ಟು ಆರು ಮಂದಿ ವಿಜ್ಞಾನಿಗಳು ಗಾಯಗೊಂಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದ ಅವರು, ಇಂದು ಮಧ್ಯಾಹ್ನ 2.45ರ ವೇಳೆಗೆ ಎಫ್ಎಸ್ಎಲ್ ನಲ್ಲಿ ಟ್ಯಾಪ್ಟ್ ಎಂಬ ರಾಸಾಯನಿಕ ಪರೀಕ್ಷೆ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಈ ವೇಳೆ ಸೀನಿಯರ್ ಆಫೀಸರ್ ಶ್ರೀನಾಥ್ ಎಂಬುವರ ನಾಲ್ಕು ಬೆರಳುಗಳು ತುಂಡಾಗಿದ್ದು, ವಿಶ್ವವಲ್ಲಭ ಎಂಬುವರ ಕಣ್ಣಿಗೆ ತೀವ್ರ ಹಾನಿಯಾಗಿದೆ. ಸದ್ಯ ಚಿಕಿತ್ಸೆಗಾಗಿ ಸೈಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ರು.
ರಾಯಚೂರು ಪಶ್ಚಿಮ ವಲಯದಿಂದ ರಾಸಾಯನಿಕ ವಸ್ತು ಕಳುಹಿಸಲಾಗಿತ್ತು. ಕೆಮಿಸ್ಟ್ರಿ ಲ್ಯಾಬ್ನಲ್ಲಿ ಅನಾಲಿಸಿಸ್ ಮಾಡುವಾಗ ದುರ್ಘಟನೆ ನಡೆದಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮಾಡಲಾಗುವುದು ಎಂದರು.