ಬೆಂಗಳೂರು: ಮನೆ ಮಾಲೀಕನ ಮಗ ಆಟ ಆಡೋಕೆ ಆಗಾಗ ಟೆರೆಸ್ಗೆ ಬರ್ತಿದ್ದ. ಮನೆಯಲ್ಲಿ ದುಡ್ಡಿದೆ..ದುಡ್ಡಿದೆ ಅಂತಿದ್ದ. ಇದೇ ಸರಿಯಾದ ಸಮಯ ಎಂದುಕೊಂಡ ಆ ಸಹೋದರಿಯರು ಪ್ಲಾನ್ ಮಾಡಿದ್ರು ನೋಡಿ. ಮನೆ ಮಾಲೀಕರು ಹೊರ ಹೋಗಿ ಬರುವಷ್ಟರಲ್ಲಿ ಹಣ, ಚಿನ್ನ ಎಗರಿಸಿ ಪರಾರಿಯಾಗಿದ್ದರು. ಹೌದು, ಬಾಡಿಗೆಗಿದ್ದ ಮನೆ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಅಕ್ಕ ತಂಗಿಯರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಸುಮಯ್ಯ ತಾಜ್, ನಾಜೀಮಾ ತಾಜ್ ಬಂಧಿತರು. ಕೂಲಿ ಕೆಲಸ ಮಾಡಿಕೊಂಡಿದ್ದ ಸುಮಯ್ಯ ತಾಜ್ ಜಯನಗರ 1ನೇ ಬ್ಲಾಕ್ನ ದಯಾನಂದ ನಗರದಲ್ಲಿ ಮನೆ ಮಾಡಿಕೊಂಡು ವಾಸವಿದ್ದಳು. ತಂಗಿ ಬಳಿಯೇ ಇರೋಣ ಅಂದುಕೊಂಡಿದ್ದ ನಾಜೀಮಾ ಕೂಡ ತಂಗಿ ಸುಮಯ್ಯ ಇದ್ದ ಎದುರು ಮನೆಯಲ್ಲಿಯೇ ಎರಡನೇ ಮಹಡಿಯಲ್ಲಿ ಬಾಡಿಗೆಗೆ ಬಂದು ಸೇರಿಕೊಂಡಿದ್ದಳು.
ಮೊದಲ ಮಹಡಿಯಲ್ಲಿ ಮನೆ ಮಾಲೀಕ ಜಬಿ ಹಾಗೂ ಹಾಜಿರಾ ದಂಪತಿ, ಜೊತೆಗೆ ಕಾಲೇಜಿಗೆ ಹೋಗುವ ಹೆಣ್ಣು ಮಗಳು ಹಾಗೂ 13 ವರ್ಷದ ಮಗನಿದ್ದ. ಮಾಲೀಕನ ಮಗ ಮನೆ ಟೆರಸ್ ಮೇಲೆ ಆಗಾಗ ಆಟ ಆಡಲು ಬರ್ತಿದ್ದ. ಮನೆಯಲ್ಲಿ ದುಡ್ಡಿದೆ, ದುಡ್ಡಿದೆ ಎಂದು ಹೇಳಿಕೊಳ್ಳುತ್ತಿದ್ದ. ಇದು ನಾಜೀಮಾ ಕಿವಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಕಳ್ಳತನ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಳು. ಅದಕ್ಕೆ ಎದುರು ಮನೆಯಲ್ಲಿದ್ದ ತಂಗಿ ಸುಮಯ್ಯಳನ್ನು ಜೊತೆ ಸೇರಿಸಿಕೊಂಡಿದ್ದಾಳೆ.
ಕಳೆದ ಫೆಬ್ರವರಿ 19ರಂದು ಮಾಲೀಕ ಜಬಿ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದರು. ಮಗಳು ಕಾಲೇಜಿಗೆ ಹೋಗಿದ್ದಳು. 13 ವರ್ಷದ ಮಗ ಮತ್ತದೇ ಟೇರಸ್ ಮೇಲೆ ಆಟವಾಡಿಕೊಳ್ತಿದ್ದ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಬಂಧಿಯೊಬ್ಬರನ್ನು ನೋಡಲು ಆಸ್ಪತ್ರೆಗೆ ಹಾಜಿರಾ ತೆರಳಿದ್ದಾಳೆ. ಈ ವೇಳೆ ಆತ್ಮೀಯಳಂತೆ ಮುಖ್ಯ ರಸ್ತೆವರೆಗೂ ಮಾತಾಡಿಸಿಕೊಂಡು ಬಂದಿದ್ದ ನಾಜೀಮಾ, ವಾಪಸ್ ಬರಲು ಎಷ್ಟು ಹೊತ್ತು ಆಗುತ್ತೆ ಎಂತೆಲ್ಲ ಮಾಹಿತಿ ಪಡೆದುಕೊಂಡಿದ್ದಳು. ತಾನು ಕೂಡ ಹೊರಗೆ ಹೋಗ್ತಿದ್ದೀನಿ ಎಂದು ಮುಖ್ಯ ರಸ್ತೆಯವರೆಗೂ ಬಂದಿದ್ದ ನಾಜೀಮಾ, ಹಾಜಿರಾ ಆಟೋ ಹತ್ತುತ್ತಿದ್ದಂತೆ ಮತ್ತೆ ಮನೆಗೆ ವಾಪಸ್ ಆಗಿದ್ದಾಳೆ.
ಹೀಗೆ ಬಂದವಳೇ ಕೆಳ ಮಹಡಿಯ ಮೆಟ್ಟಿಲಿಗೆ ಅಡ್ಡಲಾಗಿ ಕುಳಿತು ಬಿಟ್ಟಿದ್ದಳು. ಮೇಲೆ ಯಾರಿಗೂ ಹೋಗಲು ಬಿಡದೇ ಮಾತನಾಡಿಸಿಕೊಂಡು ಕುಳಿತಿದ್ದಳು. ಅಷ್ಟೊತ್ತಿಗಾಗಲೇ ನಕಲಿ ಕೀ ಬಳಸಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ತಂಗಿ ಸುಮಯ್ಯ ತಾಜ್ ಹಾಗೂ ಅಕ್ಬರ್ ಎಂಬಾತ ರಾಡ್ನಿಂದ ಬೀರು ಒಡೆದು 2.34 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ, 10 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದಾರೆ.
ಮನೆ ಮಾಲೀಕರು ಸಂಜೆ ಮನೆಗೆ ಬಂದಾಗ ವಿಷಯ ಗೊತ್ತಾಗಿದೆ. ಮಗಳ ಮದುವೆಗೆ ತಮ್ಮ ಲಾರಿ ಮಾರಿ ತಂದಿಟ್ಟಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಬಳಿಕ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಡ್ರಗ್ಸ್ ದಂಧೆ: ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳು ಸೇರಿ ನಾಲ್ವರ ಬಂಧನ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಡಾವಣೆಯ ಸಿಸಿಟಿವಿ ದೃಶ್ಯ ಹಾಗೂ ಟವರ್ ಡಂಪ್ ಆಧಾರದ ಮೇಲೆ ಕಳ್ಳರು ಈ ಅಕ್ಕ ತಂಗಿ ಅನ್ನೋದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸಿದ್ದು, 4 ಲಕ್ಷ ರೂ. ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಇನ್ನು, ಸುಮಯ್ಯ ಹಾಗೂ ನಾಜೀಮಾ ಕದ್ದ ದುಡ್ಡಲ್ಲಿ ಶೋಕಿ ಮಾಡಿದ್ದಾರೆ. 14 ಚೂಡಿದಾರ್ ಸೇರಿದಂತೆ ಹಲವು ಬಟ್ಟೆ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೋಲಾರದಲ್ಲಿರುವ ತಮ್ಮ ತಂದೆ ಮನೆಯವರಿಗೂ ಹಣ ನೀಡಿದ್ದಾರೆ. ಸದ್ಯ ಬಾಡಿಗೆ ಕೊಟ್ಟ ಮಾಲೀಕರ ಮನೆಗೆ ಕನ್ನ ಹಾಕಿದ್ದ ಆಸಾಮಿಗಳ ಬಂಧನವಾಗಿದ್ದು, ಸಿದ್ದಾಪುರ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.