ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆಗಿದೆ. ಈ ವೇಳೆ ರೈತರ ಸುರಕ್ಷತೆ ದೃಷ್ಟಿಯಿಂದ ರೇಷ್ಮೆ ಮಾರುಕಟ್ಟೆಯನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಮಾರುಕಟ್ಟೆ ಆರಂಭಿಸಲು ಒತ್ತಾಯ ಕೇಳಿ ಬಂದ ಕಾರಣ ಕೆಲವೆಡೆ ಮಾರುಕಟ್ಟೆಯನ್ನು ಪುನರಾರಂಭಿಸಲಾಗಿತ್ತು.
ರೇಷ್ಮೆ ಸಚಿವ ಸಚಿವ ಡಾ. ನಾರಾಯಣಗೌಡ ಅವರ ಸೂಚನೆಯಂತೆ ರೇಷ್ಮೆ ಮಾರುಕಟ್ಟೆ ಪುನಾರಾರಂಭ ಮಾಡಿರುವ ಹಿನ್ನೆಲೆ ರೇಷ್ಮೆ ಬೆಳೆಗಾರರು ಇಳುವರಿಗೆ ಉತ್ತಮ ಆದಾಯ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಮುಖ ಮಾರುಕಟ್ಟೆಗಳಾದ ರಾಮನಗರ, ಶಿಡ್ಲಘಟ್ಟ, ಕನಕಪುರ, ಕೊಳ್ಳೆಗಾಲದ ಮಾರುಕಟ್ಟೆಗಳನ್ನು ಪುನಾರಾರಂಭಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಪ್ರಮುಖ ಮಾರುಕಟ್ಟೆಗಳನ್ನು ವಿಂಗಡಿಸಿ ಜನಜಂಗುಳಿ ಆಗದಂತೆ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ಬೆಲೆಯಲ್ಲಿ ಕೂಡಾ ಗಣನೀಯ ಏರಿಕೆ ಆಗಿದೆ.
ಪ್ರಮುಖ ಮಾರುಕಟ್ಟೆ ಆರಂಭಿಸುವ ಮುನ್ನ ಮಿಶ್ರತಳಿ ರೇಷ್ಮೆಗೂಡಿನ ಬೆಲೆ ಪ್ರತಿ ಕೆ.ಜಿಗೆ 241 ರೂಪಾಯಿ ಇತ್ತು. ಈಗ ಪ್ರತಿ ಕೆಜಿಗೆ 303 ರೂಪಾಯಿ ಧಾರಣೆ ಸಿಗುತ್ತಿದೆ. ದ್ವಿತಳಿಗೆ ಕೂಡಾ ಈ ಮುನ್ನ 273 ರೂಪಾಯಿ ಬೆಲೆ ಇದ್ದದ್ದು, ಈಗ 317 ರೂಪಾಯಿ ಆಗಿದೆ. ಮೊದಲ ದಿನದ ವಹಿವಾಟು ಸುಮಾರು 17 ಮೆಟ್ರಿಕ್ ಟನ್ ನಷ್ಟು ಇತ್ತು. ಈಗ ದಿನಂಪ್ರತಿ 67 ಮೆಟ್ರಿಕ್ ಟನ್ನಷ್ಟು ವಹಿವಾಟು ಆಗುತ್ತಿದೆ.