ಬೆಂಗಳೂರು: ಜಂಟಿ ಸದನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಮಾತನಾಡಿದ್ರೆ ಅಮಾನತು ಮಾಡ್ತೀವಿ ಎಂದಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ವಿಧಾನಪರಿಷತ್ನ ಸಭಾಪತಿಗೆ ಈ ತರಹದ ಸುತ್ತೋಲೆ ಹೊರಡಿಸಲು ಅಧಿಕಾರವೇ ಇಲ್ಲ. ಸದನದಲ್ಲಿ ಸಭೆ ನಡೆಸುವ ಜವಾಬ್ದಾರಿ ಅವರಿಗೆ ಕೊಟ್ಟಿರುವುದು. ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಅಧಿಕಾರ ಇಲ್ಲ ಎಂದರು.
ಸ್ಪೀಕರ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ವಿಧಾನ ಸಭೆ ಮತ್ತು ಪರಿಷತ್ ನಿಯಮಾವಳಿಗಳಂತೆ ಸದನ ನಡೆಯಬೇಕು. ನಮ್ಮ ಹಕ್ಕು ಮೊಟಕುಗೊಳಿಸಲು ಬಿಡಲ್ಲ. ಸದನದಲ್ಲಿ ನಾನು ಮಾತನಾಡುತ್ತೀನಿ ಅಂದ್ರೆ ಅದು ಜನರ ಧ್ವನಿ, ದೇಶದ ಪರವಾದ ಧ್ವನಿ. ಇದನ್ನು ಹತ್ತಿಕ್ಕುವುದನ್ನು ಹಿಟ್ಲರ್ ಧೋರಣೆ ಅಂತನೇ ಎನ್ನಬೇಕು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿಎಎ ಕಾಯ್ದೆ ವಿರೋಧಿಸಿದವರನ್ನೆಲ್ಲಾ ದೇಶದ್ರೋಹಿ ಎನ್ನಲಾಗ್ತಿದೆ. ಸ್ಪೀಕರ್ ನಡೆಯನ್ನು ವಿರೋಧಿಸುತ್ತೇವೆ. ಸ್ಪೀಕರ್ ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ನಡೆದುಕೊಳ್ಳಲಿ ಎಂದರು.
ಮಾಜಿ ಸಚಿವರ ಭದ್ರತೆಯನ್ನು ವಾಪಸ್ ಪಡೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲರಿಗೂ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ. ಯಾರಿಗಾದ್ರು ಅಭದ್ರತೆ ಇದ್ರೆ ಸರ್ಕಾರ ಭದ್ರತೆ ಕೊಡಬೇಕು, ಅದು ಸರ್ಕಾರದ ಜವಾಬ್ದಾರಿ ಎಂದರು.