ಬೆಂಗಳೂರು : ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಪುತ್ರ ಅರ್ಜುನ್ ವಿವಾಹ ಸಮಾರಂಭ ದೆಹಲಿಯ ಜನಪಥ್ ರಸ್ತೆಯ ಇಂಪೇರಿಯಲ್ ಹೋಟೆಲ್ನಲ್ಲಿ ನಡೆಯುತ್ತಿದ್ದು, ಸಿದ್ದರಾಮಯ್ಯ ಇದರಲ್ಲಿ ಭಾಗಿಯಾಗಲಿದ್ದಾರೆ.
ವಿವಾಹದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂದು ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿರುವ ಅವರು, ಸಂಜೆ ಆರು ಗಂಟೆಗೆ ದೆಹಲಿಯಿಂದ ಹೊರಟು ರಾತ್ರಿ ಬೆಂಗಳೂರು ತಲುಪಲಿದ್ದಾರೆ.
ಇದು ಕೇವಲ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಖಾಸಗಿ ಭೇಟಿಯಾಗಿದೆ. ಈ ಸಂದರ್ಭದಲ್ಲಿ ಯಾವುದೇ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಕಳೆದ ಒಂದು ವಾರದಿಂದ ನಿರಂತರ ಪ್ರವಾಸದಲ್ಲಿರುವ ಸಿದ್ದರಾಮಯ್ಯ, ಇಂದು ಬೆಂಗಳೂರಿನಲ್ಲಿ ತಂಗಲಿದ್ದು, ನಾಳೆ ಬೆಳಗ್ಗೆ ಮೈಸೂರು ಜಿಲ್ಲೆಗೆ ತೆರಳಲಿದ್ದಾರೆ.
ಬೆಳಗ್ಗೆ 9.30ಕ್ಕೆ ಹೊರಟು, ಮಧ್ಯಾಹ್ನ ಕೆಆರ್‌ನಗರದಲ್ಲಿ ನಡೆಯುವ ಕಾಂಗ್ರೆಸ್ ಮುಖಂಡ ಶಿವರಾಂ ಪುತ್ರಿ ವಿವಾಹ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ತೆರಳಿ, ಅಲ್ಲಿನ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರವೂ ಕೂಡ ಮೈಸೂರಿನಲ್ಲಿಯೇ ಇರಲಿದ್ದು, ಸಂಜೆಯ ಹೊತ್ತಿಗೆ ವಾಪಸ್ ಆಗುವ ನಿರೀಕ್ಷೆ ಇದೆ.
ಓದಿ: ‘ರೈತರೊಂದಿಗೆ ಒಂದು ದಿನ’: ಟ್ರ್ಯಾಕ್ಟರ್ ಏರಿದ ಕೃಷಿ ಸಚಿವ
ಮಾರ್ಚ್ 4ರಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಲಿದೆ. ಮಂಗಳವಾರ ಅಥವಾ ಬುಧವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಹಾಗೂ ಹೋರಾಟಗಳ ಕುರಿತು ಚರ್ಚಿಸಲು ಪಕ್ಷದ ಶಾಸಕಾಂಗ ಸಭೆ ನಡೆಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದು, ದಿನಾಂಕ ನಿಗದಿಯಾಗಬೇಕಿದೆ.