ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಸುಪ್ರೀಂಕೋರ್ಟ್ ನಿರ್ಧಾರವನ್ನು ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಅನರ್ಹ ಶಾಸಕರ ವಿಚಾರವಾಗಿ ಮಹತ್ವದ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ರಾಜ್ಯದ ಆಗಿನ ಸ್ಪೀಕರ್ ರಮೇಶ್ ಕುಮಾರ್ ಮಾಡಿರುವ ಆದೇಶವನ್ನು ಭಾಗಶಃ ಎತ್ತಿ ಹಿಡಿದಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದರು.
ಜೆಡಿಎಸ್ನ 17 ಶಾಸಕರು ರಾಜೀನಾಮೆ ಕೊಟ್ಟಿದ್ದರು, ಜೊತೆಗೆ ವಿಪ್ ಉಲ್ಲಂಘನೆ ಮಾಡಿದ್ದರು. ವಿಪ್ ಉಲ್ಲಂಘನೆ ಮಾಡಿರುವುದಲ್ಲದೇ, ರಾಜೀನಾಮೆ ವಾಸ್ತವಿಕತೆಯಿಂದ ಕೂಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹ ಮಾಡಿದ್ದರು. ಅವರು ಪಕ್ಷಾಂತರ ಮಾಡಿರುವುದರಿಂದ ಅನರ್ಹಗೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಸಕರು ರಾಜೀನಾಮೆ ಕೊಡಬಹುದು ಹಾಗಂತ ಮನಸ್ಸೋ ಇಚ್ಛೆ ವರ್ತಿಸುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗಿಸುತ್ತೇನೆ. ಆದರೆ ಅವರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜನರು ಅನರ್ಹರನ್ನು ಚುನಾವಣೆಯಲ್ಲಿ ಸೋಲಿಸುತ್ತಾರೆ. ಜನರು ದ್ರೋಹ ಮಾಡಿದವರನ್ನು ಸಹಿಸಿಕೊಳ್ಳುವುದಿಲ್ಲ. ಗುಜರಾತ್, ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿರುವರು ಬಹುತೇಕ ಸೋತಿದ್ದಾರೆ. ಕರ್ನಾಟಕದಲ್ಲೂ ಅನರ್ಹರು ಸೋಲಲಿದ್ದಾರೆ. ಮತದಾರರು ಖಂಡಿತ ಅನರ್ಹರಿಗೆ ಪಾಠ ಕಲಿಸ್ತಾರೆ ಎಂದರು.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸೋದಿಲ್ಲ, ಅದ್ರೆ ಪಕ್ಷದಲ್ಲಿ ಕೂತು ಇದರ ಬಗ್ಗೆ ಚರ್ಚಿಸುತ್ತೇವೆ. ಸುಪ್ರೀಂಕೋರ್ಟ್ ಆದೇಶ ಏನೇ ಇರಲಿ ಕೊನೆಗೆ ಜನರು ತೀರ್ಮಾನ ಮಾಡ್ತಾರೆ. ಈ ತೀರ್ಪಿನಿಂದ ಕಾಂಗ್ರೆಸ್ಗೆ ಸಂಪೂರ್ಣ ಗೆಲುವು ಸಿಕ್ಕಿದೆ ಎಂದರು.
ಇದೇ ವೇಳೆ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಆಗಿದೆ. ಇಂದು ಅಥವಾ ನಾಳೆ ಎಲ್ಲಾ ಅಭ್ಯರ್ಥಿಗಳನ್ನು ಫೈನಲ್ ಮಾಡ್ತೀವಿ ಎಂದು ಹೇಳಿದರು.