ಬೆಂಗಳೂರು: ಕರ್ನಾಟಕ ಯುವ ಕಾಂಗ್ರೆಸ್ ಆಯೋಜಿಸಿರುವ ಮಾಜಿ ಪ್ರಧಾನಿ, ದಿ. ಇಂದಿರಾ ಗಾಂಧಿ ಅವರ ಕುರಿತಾದ 'ಭಾರತದ ಇಂದಿರಾ' ಛಾಯಾಚಿತ್ರ ಪ್ರದರ್ಶನವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವೀಕ್ಷಿಸಿದರು.
ನವೆಂಬರ್ 30ರಂದು ಆರಂಭವಾಗಿರುವ ಈ ಛಾಯಾಚಿತ್ರ ಪ್ರದರ್ಶನ ಡಿಸೆಂಬರ್ 5 ರವರೆಗೂ ನಡೆಯಲಿದೆ. ಇಂದು ಸಂಜೆಯ ನಂತರ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪ್ರಚಾರಕ್ಕೆ ತೆರಳುವ ಹಿನ್ನೆಲೆ ಸಿದ್ದರಾಮಯ್ಯ ಮಧ್ಯಾಹ್ನವೇ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ತೆರಳಿದರು.
ಉದ್ಘಾಟನೆ ದಿನವೇ ಸಮಾರಂಭಕ್ಕೆ ಆಗಮಿಸಬೇಕಿದ್ದ ಅವರು ಅನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿನ್ನೆಲೆ ಆಗಮಿಸಿರಲಿಲ್ಲ. ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಮುಖಂಡರ ಸೇರ್ಪಡೆ ಕಾರ್ಯಕ್ರಮದ ಬಳಿಕ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಹಿಂಭಾಗದ ಮೈದಾನದಲ್ಲಿ ಹಮ್ಮಿಕೊಂಡಿರುವ ಇಂದಿರಾಗಾಂಧಿ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 104ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಕರ್ನಾಟಕ ಯುವ ಕಾಂಗ್ರೆಸ್ನಿಂದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ. ಇಂದಿರಾಗಾಂಧಿ ಅವರ ಅಪರೂಪದ ಛಾಯಾಚಿತ್ರಗಳ ಸಂಗ್ರಹ ಇದಾಗಿದ್ದು, ದಿಲ್ಲಿಯಿಂದ ಒಟ್ಟು 650ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಕಳುಹಿಸಿಕೊಡಲಾಗಿದೆ. ಕರ್ನಾಟಕಕ್ಕೆ ಇಂದಿರಾ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಲಾಗಿದ್ದು ಇದರ ಸಂಖ್ಯೆ 100ಕ್ಕೂ ಹೆಚ್ಚಿದೆ.
ಇದನ್ನೂ ಓದಿ: ಕೆಜಿಎಫ್ ಬಾಬು ವಿರುದ್ಧ 21 FIR.. ಈ ಬಗ್ಗೆ ದಾಖಲೆ ಇವೆ: ಸಚಿವ ಎಸ್.ಟಿ.ಸೋಮಶೇಖರ್
ಎಲ್ಲ ಛಾಯಾಚಿತ್ರಗಳು ಸೇರಿ 750ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಇಲ್ಲಿ ಆಗಿದ್ದು, ಮೂರು ಸಾವಿರದ ಐದುನೂರು ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಛಾಯಾಚಿತ್ರಗಳನ್ನು ಲಗತ್ತಿಸಿ ಪ್ರದರ್ಶನಕ್ಕೆ ಇರಿಸಲಾಗಿದೆ. ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಆಗಮಿಸಿ ಉಚಿತವಾಗಿ ಈ ಪ್ರದರ್ಶನ ವೀಕ್ಷಿಸಬಹುದಾಗಿದೆ. ಇಂದಿರಾಗಾಂಧಿ ಸಾಧನೆ ಹಾಗೂ ಜನಸ್ನೇಹಿ ಕಾರ್ಯಗಳ ಕುರಿತು ಮಾರ್ಗದರ್ಶನ ನೀಡುವ ಕಾರ್ಯವನ್ನು ಛಾಯಾಚಿತ್ರ ಪ್ರದರ್ಶನ ಮಾಡಲಿದೆ.