ಬೆಂಗಳೂರು : ನಾಡಿನ ಸಮಸ್ತ ಜನತೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆರೋಗ್ಯಕರ, ಸುರಕ್ಷಿತ ಮತ್ತು ಸರಳವಾಗಿ ಮನೆಯಲ್ಲಿಯೇ ಉಳಿದು ಯುಗಾದಿ ಹಬ್ಬ ಆಚರಿಸೋಣ. ಸಹಜೀವಿಗಳೆಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ, ಯುಗಾದಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
ಕೊರೊನಾ ವೈರಸ್ ಹುಟ್ಟಿಸಿರುವ ಭೀತಿಯ ಹಿನ್ನೆಲೆಯಲ್ಲಿ ಕನ್ನಡ ಪತ್ರಿಕೆಗಳ ಸಂಪಾದಕರು ಸೇರಿ ಪತ್ರಿಕೆಗಳು ಸುರಕ್ಷಿತವಾಗಿವೆ ಎಂದು ಒಕ್ಕೊರಲಿನ ಭರವಸೆ ನೀಡಿರುವುದು ಸ್ವಾಗತಾರ್ಹ. ಈ ಮೂಲಕ ಓದುಗರ ಮನದಲ್ಲಿದ್ದ ಆತಂಕ ದೂರ ಮಾಡಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ.
ಕೊರೊನಾ ಸೋಂಕಿನ ಭಯದ ಸ್ಥಿತಿಯಲ್ಲಿ ದಿಟ್ಟತನದಿಂದ ಕೆಲಸ ಮಾಡುತ್ತಿರುವ ಮಾಧ್ಯಮ ಕ್ಷೇತ್ರದ ವರದಿಗಾರರು, ಕ್ಯಾಮೆರಾಮೆನ್‌ಗಳು ಮುದ್ರಣಾಲಯದ ಕಾರ್ಮಿಕರು, ಚಾಲಕರು, ಪತ್ರಿಕೆಯ ವಿತರಕರೆಲ್ಲರಿಗೂ ಅಭಿನಂದನೆಗಳು. ಮಾಧ್ಯಮ ಕ್ಷೇತ್ರ ಕೂಡಾ ಅಗತ್ಯ ಸೇವೆ ಎಂದು ಪರಿಗಣಿಸಿ ರಾಜ್ಯಸರ್ಕಾರ ಇವರ ಸುರಕ್ಷತೆಗೆ ಗಮನ ನೀಡಬೇಕು ಎಂದು ಹೇಳಿದ್ದಾರೆ.