ಬೆಂಗಳೂರು: ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ಈ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸಿದರೆ ಸತ್ಯ ಬಯಲಾಗುತ್ತದೆ. ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ವಿ.ಎಚ್.ಪಿ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸ್ಥಳೀಯ ಶಾಸಕರ ವಿರುದ್ಧ ಭುಗಿಲೆದ್ದ ಜನಾಕ್ರೋಶದ ಹಿನ್ನೆಲೆಯನ್ನೂ ಪೊಲೀಸರು ತನಿಖೆ ಮಾಡಬೇಕಾಗಿದೆ.
ಆತ್ಮೀಯರಾಗಿದ್ದು ದೂರವಾಗಿದ್ದೇಕೆ?: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಆತ್ಮೀಯನಾಗಿದ್ದ ಮೃತ ಪ್ರವೀಣ್ ನೆಟ್ಟಾರು ಒಂದಷ್ಟು ಕಾಲ ನಳಿನ್ ಅವರ ಕಾರಿಗೆ ಚಾಲಕನೂ ಆಗಿದ್ದರಂತೆ. ಇಷ್ಟೊಂದು ಆತ್ಮೀಯರಾಗಿದ್ದವರು ದೂರವಾಗಿರುವುದು ಯಾಕೆ? ಪೊಲೀಸರು ಅವರನ್ನೂ ವಿಚಾರಣೆಗೊಳಪಡಿಸಿದರೆ ದುಷ್ಕರ್ಮಿಗಳ ಪತ್ತೆಗೆ ನೆರವಾದೀತು ಎಂದು ತಿಳಿಸಿದ್ದಾರೆ.
ಹಿಂದೂಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದೂಗಳ ಮೇಲೆ ಸಂಶಯ ಪಡುವುದು ಸಾಮಾನ್ಯವಾಗಿಬಿಟ್ಟಿದೆ. ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿಹೋಗುತ್ತಿದೆ. ಹತ್ಯೆ ನಡೆಸಿರುವ ದುಷ್ಕರ್ಮಿಗಳು ಯಾವುದೇ ಪಕ್ಷ, ಜಾತಿ, ಧರ್ಮ ಇಲ್ಲವೇ ಸಂಘಟನೆಗಳಿಗೆ ಸೇರಿದ್ದರೂ ಮುಲಾಜಿಲ್ಲದೇ ಅವರನ್ನು ಬಂಧಿಸಿ ಜೈಲಿಗಟ್ಟಬೇಕು.
ಯಾವುದಾದರೂ ಸಂಘಟನೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಅವುಗಳನ್ನು ನಿಷೇಧಿಸುವ ದಿಟ್ಟತನವನ್ನು ರಾಜ್ಯ ಸರ್ಕಾರ ತೋರಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಬಹಿರಂಗವಾಗಿ ಮುಸ್ಲಿಮರ ಬಗ್ಗೆ ಬೆಂಕಿ ಕಾರಿದರೂ, ಮುಸ್ಲಿಂ ಉದ್ಯಮಿಗಳ ಜೊತೆ ಅವರಿಗೆ ಹಾರ್ದಿಕ ಸಂಬಂಧ ಇರುವುದನ್ನು ಅವರೇ ಹಲವಾರು ಬಾರಿ ಬಹಿರಂಗ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧಗಳು ಕೇವಲ ಸಾಮಾಜಿಕವಾದುದ್ದೇ? ಇಲ್ಲವೇ ವ್ಯಾಪಾರ ವಹಿವಾಟಿನದ್ದೇ? ಎಂದು ಪ್ರಶ್ನಿಸಿದ್ದಾರೆ.
ಹಿಂದುಳಿದವರೇ ಏಕೆ ಬಲಿಯಾಗ್ತಿದ್ದಾರೆ?: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಕೆ ಹಿಂದುಳಿದ ಜಾತಿಗಳ ಅದರಲ್ಲೂ ಮುಖ್ಯವಾಗಿ ಬಿಲ್ಲವ ಯುವಕರೇ ಕೋಮುಘರ್ಷಣೆಯಲ್ಲಿ ಬಲಿಯಾಗುತ್ತಿದ್ದಾರೆ? ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿರುವ ಈ ಸಮುದಾಯದ ಯುವಕರು ಯಾಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ?.
ಬಸವರಾಜ ಬೊಮ್ಮಾಯಿ ಅವರು ಕೇವಲ ಬಿಜೆಪಿ ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿಗಳೋ? ಇಲ್ಲವೇ ರಾಜ್ಯದ ಸಮಸ್ತ ಆರುವರೆ ಕೋಟಿ ಜನತೆಗೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದ ಸಿಎಂ, ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಮನೆಗೆ ಹೋಗದಿರಲು ಕಾರಣ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.
ಮೃತ ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಎಷ್ಟೇ ಮೊತ್ತದ ಪರಿಹಾರ ನೀಡಿದರೂ ಅದು ಅವರ ಸಂಘಟನೆಗೆ ಸಂಬಂಧಿಸಿದ್ದು, ಆದರೆ ವಿಚಾರಣಾ ಹಂತದಲ್ಲಿರುವ ಹತ್ಯೆ ಪ್ರಕರಣಗಳಲ್ಲಿ ಕುಟುಂಬಗಳಿಗೆ ಪರಿಹಾರ ನೀಡುವಾಗ ಭೇದಭಾವ ಆಗದಂತೆ ಎಚ್ಚರಿಕೆ ವಹಿಸುವುದು ಸಿಎಂ ಕರ್ತವ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪಕ್ಷ ಇಲ್ಲವೇ ಸರ್ಕಾರದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಅಸಹಾಯಕರಾಗಿರುವ ಬೊಮ್ಮಾಯಿಯವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್.ಎಸ್.ಎಸ್ ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ. ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿದೆ ಎಂದು ಕಿಡಿಕಾರಿದರು.
(ಇದನ್ನೂ ಓದಿ: ರಾಜ್ಯದಲ್ಲಿ ಸರ್ಕಾರವೇ ಸತ್ತುಹೋಗಿದೆ: ಸಿದ್ದರಾಮಯ್ಯ ತೀವ್ರ ಆಕ್ರೋಶ)