ಬೆಂಗಳೂರು: ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುಮತ ಇಲ್ಲದೇ ಇದ್ದರೂ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹೊರಟಿರುವುದು ಮತ್ತು ಅವರ ತರಾತುರಿಯ ನಿರ್ಧಾರವನ್ನು ರಾಜ್ಯಪಾಲರು ಒಪ್ಪಿರುವುದು ಎರಡೂ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬೆಳವಣಿಗೆಗಳು. ಸಂವಿಧಾನದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
![jds](https://etvbharatimages.akamaized.net/etvbharat/prod-images/kn-bng-01-jds-tweet-script-9024736_26072019115837_2607f_1564122517_1078.jpg)
ವಿಧಾನಸಭೆಯ ಸಂಖ್ಯಾ ಬಲ 222, ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲ 112. ಆದರೆ ಬಿಜೆಪಿಯವರು ನನಗೆ 105 ಶಾಸಕರ ಬೆಂಬಲವಿದೆ ಎಂದು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇದಕ್ಕೆ ರಾಜ್ಯಪಾಲರು ಬಹುಮತದ ಸರ್ಕಾರ ರಚನೆಯ ಕುರಿತು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಜೆಡಿಎಸ್ ಸಹ ಟ್ವೀಟ್ನಲ್ಲಿ ಟೀಕಿಸಿದೆ.
ಇನ್ನು ಮಾಜಿ ಸಚಿವ ಯು.ಟಿ ಖಾದರ್ ಸಹ ಬಿಜೆಪಿಗೆ ಬಹುಮತ ಇಲ್ಲ, ಯಡಿಯೂರಪ್ಪನವರ ಪ್ರಮಾಣವಚನಕ್ಕೆ ರಾಜ್ಯಪಾಲರು ತರಾತುರಿಯಲ್ಲಿ ಅವಕಾಶ ಕೊಟ್ಟಿದ್ದಾರೆ ಅನ್ನಿಸುತ್ತದೆ ಎಂದು ತಿಳಿಸಿದ್ದಾರೆ.