ಬೆಂಗಳೂರು: ನೆರೆ ಪರಿಹಾರ ಸಂಬಂಧ ರಾಜ್ಯದ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪನವರೇ, ನಿಮ್ಮ ಜಗಳದಲ್ಲಿ ಕರ್ನಾಟಕವನ್ನು ಯಾಕೆ ಬಲಿಕೊಡುತ್ತೀರಿ? ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಯೋಗ್ಯತೆ ನರೇಂದ್ರ ಮೋದಿ ಸರ್ಕಾರಕ್ಕಿಲ್ಲ. ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ. ಆರ್ಥಿಕವಾಗಿ ಮಾತ್ರವಲ್ಲ, ಬೌದ್ದಿಕವಾಗಿಯೂ ನಿಮ್ಮ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ನಿಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣ ಕೂಡಾ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟುಬಿಡಿ. ನಿಮ್ಮ ಅಸಾಮರ್ಥ್ಯಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ ಎಂದು ಟ್ವೀಟ್ ಮಾಡಿ, ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಇದೇ ವಿಷಯಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ಪಕ್ಷ, ಪರಿಹಾರ ಬಿಡುಗಡೆ ಮಧ್ಯಂತರವೂ ಇಲ್ಲ, ವರದಿ ನಂತರವೂ ಇಲ್ಲ! ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದ್ಹೇಗೆ? 25 ಮಂದಿ ಉತ್ತರಕುಮಾರರೇ(ಸಂಸದರು) ನಿಮ್ಮ ಉತ್ತರವೇನು? ಯಡಿಯೂರಪ್ಪನವರೇ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ, ಇಲ್ಲ ನಿರ್ಗಮಿಸಿ ಎಂದು ಟ್ವೀಟ್ ಮಾಡಿದೆ.