ಬೆಂಗಳೂರು: ವೀಕೆಂಡ್ ಕರ್ಫ್ಯೂ ಘೋಷಣೆಯ ನಂತರವೂ ಭಾನುವಾರ ಆರಂಭವಾಗಲಿರುವ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಕಲ ಸಿದ್ಧತೆ ನಡೆಸಿದ್ದು, ಅದಕ್ಕಾಗಿ ಬುಧವಾರ ರಾಜಾಜಿನಗರದ ಒರಾಯನ್ ಮಾಲ್ಗೆ ಭೇಟಿ ನೀಡಿದ ಶೂ ಖರೀದಿಸಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭ ಯಾವುದೇ ರೀತಿಯ ಅನಾನುಕೂಲ ಉಂಟಾಗಬಾರದೆಂದು ಅತ್ಯಾಧುನಿಕ ಮಾದರಿಯ ಶೂಗಳನ್ನು ಆಯ್ದು ಖರೀದಿಸಿದರು.
ಈಗಾಗಲೇ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜೊತೆ ವಾರದ ದಿನಗಳಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹೇರಿದೆ. ಆದರೂ ಈ ಮೊದಲೇ ನಡೆಸಲು ಉದ್ದೇಶಿಸಿರುವ ಮೇಕೆದಾಟು ಪಾದಯಾತ್ರೆಯನ್ನು ನಿಯಮಗಳನ್ನು ಪಾಲಿಸುವ ಮೂಲಕ ನಡೆಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ನಿಗದಿಯಂತೆ ವಾರಾಂತ್ಯ ಕರ್ಫ್ಯೂ ಇರುವ ಜನವರಿ 9ರಂದು ಬೆಳಗ್ಗೆ ರಾಮನಗರ ಜಿಲ್ಲೆಯ ಮೇಕೆದಾಟುನಿಂದ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರನ್ನು ಒಳಗೊಂಡ ಪಾದಯಾತ್ರೆ ಆರಂಭವಾಗಲಿದೆ.
ಸರ್ಕಾರದ ನಿರ್ಬಂಧವನ್ನು ತಿರಸ್ಕರಿಸಿರುವ ಕಾಂಗ್ರೆಸ್ ನಾಯಕರು ತಾವು ನಿಯಮಾವಳಿಗಳನ್ನು ಪಾಲಿಸುವ ಮೂಲಕ ಪಾದಯಾತ್ರೆ ನಡೆಸುತ್ತೇವೆ. ಸರ್ಕಾರ ಪಾದಯಾತ್ರೆ ತಡೆಯುವ ಸಲುವಾಗಿಯೇ ದುರುದ್ದೇಶದಿಂದ ವಾರಾಂತ್ಯ ಕರ್ಫ್ಯೂ ಹಾಗೂ ಹತ್ತು ಹಲವು ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇದಕ್ಕೆ ನಾವು ಬೆಲೆ ಕೊಡುವುದಿಲ್ಲ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ: ಸತೀಶ್ ಜಾರಕಿಹೊಳಿ