ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ತನಿಖೆಯಿಂದ ಬರುವ ಮಾಹಿತಿ ಆಧರಿಸಿ ಮುಂದೆ ಯಾವ ಸಂಸ್ಥೆಯಿಂದ ತನಿಖೆ ನಡೆಸಬೇಕು ಎನ್ನುವುದರ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಕೊಲೆ ಪ್ರಕರಣವನ್ನು ಎನ್ಐಎಗೆ ಕೊಡಲು ಒತ್ತಾಯ ಕೇಳಿ ಬರುತ್ತಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ. ಮೊದಲು ತನಿಖೆ ನಡೆಯಲಿ, ತನಿಖೆಯಲ್ಲಿ ಸತ್ಯ ತಿಳಿಯಲಿದೆ. ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಓದಿ :ಅಮೆರಿಕ ಬಳಿಕ ರಷ್ಯಾಗೆ ಕೆನಡಾ, ಜಪಾನ್ ಶಾಕ್: ತನ್ನ ದೇಶಗಳಲ್ಲಿ ರಷ್ಯಾ ಬ್ಯಾಂಕ್, ಹೂಡಿಕೆಗೆ ನಿರ್ಬಂಧ
ಪೊಲೀಸ್ ತನಿಖೆಯಿಂದ ಬರುವ ಮಾಹಿತಿಯನ್ನು ಆಧರಿಸಿ ಮುಂದೆ ಯಾವ ಸಂಸ್ಥೆಯಿಂದ ತನಿಖೆ ಮಾಡಿಸಬೇಕೆಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸದ್ಯ ಶಿವಮೊಗ್ಗ ಶಾಂತಿಯುತವಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ ಎಂದರು.
ಶಿವಮೊಗ್ಗದಲ್ಲಿ ನಡೆದ ಮೆರವಣಿಗೆಯಲ್ಲಿ 144 ಸೆಕ್ಷನ್ ಉಲ್ಲಂಘನೆ ಮಾಡಲಾಗಿದೆ. ಸರ್ಕಾರಿ ಪ್ರಾಯೋಜಕತ್ವದ ಮೆರವಣಿಗೆ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್‌ನವರು ಈ ಹಿಂದೆ ಸರ್ಕಾರಿ ಪ್ರಾಯೋಜಕತ್ವದಲ್ಲಿ ಇಂಥವೆಲ್ಲ ಮಾಡಿದ್ದಾರೆ.
ಅವರ ಹಿಂದಿನ ಅನುಭವದಿಂದ ಈ ಆರೋಪ ಮಾಡಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ದೆಹಲಿ ಭೇಟಿ ವಿಚಾರ ಅಲ್ಲಗಳೆದ ಸಿಎಂ ಬಸವರಾಜ ಬೊಮ್ಮಾಯಿ, ಸದ್ಯ ದೆಹಲಿಗೆ ಹೋಗುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.