ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿರಸಿ ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿದ್ದ ವ್ಯಕ್ತಿಯ ಶವವನ್ನು ತಲೆಯೊಡೆದ ಸ್ಥಿತಿಯಲ್ಲಿ ಕುಟುಂಬ ಸದಸ್ಯರಿಗೆ ನೀಡಲಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಗೊತ್ತಾಗುತ್ತಿಲ್ಲ. ಆದರೆ ಆಸ್ಪತ್ರೆಯವರು ಇದು ಕೊರೊನಾ ಸಾವು ಎಂದು ಸುಳ್ಳು ಹೇಳಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ತಲೆ ಒಡೆಯುವುದಾದರೂ ಹೇಗೆ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶವವನ್ನು ಸಂಪೂರ್ಣ ಪ್ಯಾಕ್ ಮಾಡಿದ ಸ್ಥಿತಿಯಲ್ಲಿ ಕುಟುಂಬ ಸದಸ್ಯರಿಗೆ ನೀಡಿದ ಆಸ್ಪತ್ರೆಯವರು, ಯಾವುದೇ ಕಾರಣಕ್ಕೂ ಕವರ್ ಬಿಚ್ಚದಂತೆ ತಾಕೀತು ಮಾಡಿದ್ದರು. ಅನುಮಾನ ಬಂದ ಕುಟುಂಬ ಸದಸ್ಯರು, ಕವರ್ ಬಿಚ್ವಿದಾಗ ತಲೆಯೊಡೆದು ರಕ್ತ ಸೋರುವ ಸ್ಥಿತಿಯಲ್ಲಿ ದೇಹ ಗೋಚರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೊಂದು ಕೊಲೆಯೋ ಅಥವಾ ಆತ್ಮಹತ್ಯೆಯೋ ಆಗಿರಬೇಕು. ಹೀಗಾಗಿ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ. (ಕೊರೊನಾ ಸೋಂಕಿತ ಮೃತನ ತಲೆ ಒಡೆದ ವಿಡಿಯೋ ವೈರಲ್: ಶಿರಸಿ ಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಅನುಮಾನ!)