ಕಲಬುರಗಿ: ನಮ್ಮಲ್ಲಿ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗುವವರು ಯಾರೂ ಇಲ್ಲ. ಬಿಜೆಪಿ ಇದಕ್ಕೆ ಪ್ರಯತ್ನ ಮಾಡುತ್ತಿರಬಹದು. ಇದು ಬಿಜೆಪಿಯವರ ತಿರುಕನ ಕನಸು. ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಸಂಚು ನಡೆಸುತ್ತಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಆರೋಪಿಸಿದ್ದಾರೆ.
ನಗರದ ಡಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಕಲಬುರಗಿ ಪಾಲಿಕೆ ಮೇಯರ್ ಪಟ್ಟದ ಬಗ್ಗೆ ಮಾತನಾಡಿದ ಅವರು, ಬಿಜಿಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರುವ ಕುತಂತ್ರ ನಡೆಸಿದೆ. ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡ್ತೀವಿ ಅಂತಿದ್ದಾರೆ. ಆದ್ರೆ ಅದ್ಯಾವುದು ಸಾಧ್ಯವಿಲ್ಲ. ಜೆಡಿಎಸ್ನವರು ಕಾಂಗ್ರೆಸ್ ಜೊತೆ ಮೈತ್ರಿಗಾಗಿ ಒಲವು ತೋರಿಸುತ್ತಿದ್ದಾರೆ. ಸ್ಥಳೀಯ ಜೆಡಿಎಸ್ ಮುಖಂಡರಿಗೂ ಕಾಂಗ್ರೆಸ್ ಜೊತೆ ಮೈತ್ರಿಗೆ ಹೆಚ್ಚಿನ ಒಲವಿದೆ. ಜೆಡಿಎಸ್ ಜೊತೆಗೆ ಮೈತ್ರಿ ಆಗುವ ವಿಶ್ವಾಸ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಶಾಸಕ ಪ್ರಿಯಾಂಕ ಖರ್ಗೆ ಅವರು ಕೂಡ ಕುಮಾರಸ್ವಾಮಿ ಜೊತೆ ಮಾತಾಡ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ: ಕಾಂಗ್ರೆಸ್ ಮೈತ್ರಿ ಬಗ್ಗೆ ದೇವೇಗೌಡರು ಹೇಳಿದ್ದೇನು?
ಸದ್ಯ ಮೇಯರ್ ಪಟ್ಟದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಆದರೆ ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತ ಪಕ್ಕಾ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಉತ್ತರ, ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮಾನ ಮರ್ಯಾದೆ ಎಲ್ಲಾವನ್ನು ಬಿಟ್ಟು ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಿಜೆಪಿಯವರಿಗೆ ಸಿದ್ಧಾಂತ ಇಲ್ಲ, ಹಣ ಬಲದಿಂದ ಅಧಿಕಾರ ಹಿಡಿಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ, ತಾ.ಪಂ ಚುನಾವಣೆ ಮುಂದುಡಿಕೆಗೆ ಸರ್ಕಾರ ಕುತಂತ್ರ..
ಆಪರೇಷನ್ ಕಮಲ ನಡೆಸಲು ಬಿಜೆಪಿಯವರು ಪ್ರಯತ್ನ ಮಾಡ್ತಾರೆ. ಆದ್ರೆ ಅವರ ಆಪರೇಷನ್ ಫಲಿಸೋದಿಲ್ಲ. ಕಾಂಗ್ರೆಸ್ಗೆ ಬಿಜೆಪಿಯ ಆಪರೇಷನ್ ಭಯ ಇಲ್ಲ. ಎಲ್ಲಾ ಸಂಸ್ಥೆಗಳನ್ನು ಲಾಭಕ್ಕಾಗಿ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತ್ ಚುನಾವಣೆ ಮುಂದೂಡಲು ಬೊಮ್ಮಾಯಿ ಸರ್ಕಾರ ಕುತಂತ್ರ ಮಾಡ್ತಿದೆ ಎಂದು ದೂರಿದರು.
ಕಟೀಲ್ಗೆ ಬುದ್ಧಿ ಭ್ರಮಣೆ ಆಗಿದೆಯೇನೋ?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬುದ್ಧಿ ಭ್ರಮಣೆ ಆಗಿದಿಯಾ ಏನೋ ಗೊತ್ತಿಲ್ಲ. ಕಲಬುರಗಿಗೆ ಬಂದು ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ. ಕಟೀಲ್ಗೆ ಗಣಿತ ಲೆಕ್ಕ ಗೊತ್ತಿಲ್ಲ ಅಂತಾ ಕಾಣಿಸುತ್ತೆ. ಬಿಜೆಪಿಗೆ ಬಹುಮತ ಇದೆ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಯಕ್ಷಗಾನದಲ್ಲಿ ನಟನೆ ಮಾಡಿದ ಹಾಗೆ ಮಾತಾಡಿದ್ದಾರೆ. 55 ರಲ್ಲಿ 27 ಸೀಟ್ಗಳನ್ನ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ 23 ಸೀಟ್ ಗೆದ್ದಿದೆ, ಬಿಜೆಪಿಗೆ ಯಾವ ಬಹುಮತ ಇಲ್ಲ. ಕಾಂಗ್ರೆಸ್ಗೆ 38% ಮತಗಳು ಬಂದಿವೆ, ಬಿಜೆಪಿಗೆ 31% ಬಂದಿವೆ. ಹೀಗಿರುವಾಗ ಬಿಜೆಪಿಗೆ ಬಹುಮತ ಇದೆ ಅಂತಾ ಕಟೀಲ್ ಹೇಗೆ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಬೊಮ್ಮಾಯಿ ನೂತನ ಮುಖ್ಯಮಂತ್ರಿ ಆದ ಮೇಲೆ ಬಿಜೆಪಿ ಅಭ್ಯರ್ಥಿಗಳಿಗೆ 20 ಲಕ್ಷ ರೂ. ಕೊಟ್ಟಿದ್ದಾರೆ. ಆದರೂ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ ಎಂದು ಪಾಟೀಲ್ ವ್ಯಂಗ್ಯವಾಡಿದರು.