ಬೆಂಗಳೂರು: ದೇಹದ ಕೊಬ್ಬಿನಾಂಶ ತೆಗೆದು ಹಾಕುವ (ಫ್ಯಾಟ್) ಸರ್ಜರಿ ವೇಳೆ ಕಿರುತರೆ ನಟಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. 21 ವರ್ಷದ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಪ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಇವರು ನವರಂಗ್ ಸರ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರವಾಹಿಗಳಲ್ಲಿ ಚೇತನಾ ರಾಜ್ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟನೆ ಮಾಡಿದ್ದರು. ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಕುಟುಂಬ ವಾಸವಾಗಿತ್ತು.
ಮಗಳ ಸಾವಿನ ಕುರಿತು ಪ್ರತಿಕ್ರಿಯಿಸಿರುವ ತಂದೆ ಗೋವಿಂದ ರಾಜ್, 'ನಿನ್ನೆ ಬೆಳಗ್ಗೆ 8.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಮಗೆ ವಿಚಾರ ಗೊತ್ತಾಗಿ, ನಾವು ಬರುವ ಹೊತ್ತಿಗೆ ವೈದ್ಯರು ಸರ್ಜರಿ ನಡೆಸುತ್ತಿದ್ದರು. ಸಂಜೆ ಹೊತ್ತಿಗೆ ಶ್ವಾಸಕೋಶಕ್ಕೆ ಕೊಬ್ಬಿನ ಅಂಶ ತುಂಬಿ ಉಸಿರಾಟದ ತೊಂದರೆಯಾಗಿದೆ. ಆಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಯಾವುದೇ ವ್ಯವಸ್ಥೆ ಸೂಕ್ತವಾಗಿಲ್ಲ. ಈ ಹಿಂದೆ ಕೂಡ ಚೇತನಾ ರಾಜ್ ಫ್ಯಾಟ್ ಸರ್ಜರಿಗೆ ಕೇಳಿದ್ದಳು. ನಾವು ಬೇಡ ಎಂದು ಹೇಳಿದ್ದೆವು. ಹಾಗಾಗಿ ನಮ್ಮ ಗಮನಕ್ಕೆ ಬಾರದೇ ಸರ್ಜರಿಗೆ ಬಂದಿದ್ದಾಳೆ. ಆಸ್ಪತ್ರೆ ನಿರ್ಲಕ್ಷ್ಯಕ್ಕೆ ನನ್ನ ಮಗಳು ಸಾವನ್ನಪ್ಪಿದ್ದಾಳೆ. ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ವೈದ್ಯರು ಸರ್ಜರಿಗೆ ಮುಂದಾಗಿದ್ದಾರೆ' ಎಂದು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
(ಓದಿ: ಅಕ್ಕನ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು: ಇಂದು ಅಂತ್ಯಕ್ರಿಯೆ)