ಬೆಂಗಳೂರು: ಮೇಖ್ರಿ ವೃತ್ತದಲ್ಲಿ ಕಳೆದ ಭಾನುವಾರ ಸಂಭವಿಸಿದ್ದ ಸರಣಿ ಅಪಘಾತಕ್ಕೆ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಕಾರಣ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ನಲಪಾಡ್ ಇಂದು ವಿಚಾರಣೆಗೆ ಸದಾಶಿವನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಖ್ರಿ ವೃತ್ತದಲ್ಲಿ ನಡೆದ ಸರಣಿ ಅಪಘಾತವನ್ನು ನಾನು ಮಾಡಿಲ್ಲ. ನಾನು ಕಾರಿನಲ್ಲಿ ಇದ್ದಿದ್ದು ನಿಜ. ಆದರೆ, ಕಾರು ಚಲಾಯಿಸಿದ್ದು ನನ್ನ ಚಾಲಕ. ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗಿದೆ ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ನಡೆದ ಆ ಒಂದು ಘಟನೆ (ವಿದ್ವತ್ ಹಲ್ಲೆ ಪ್ರಕರಣ) ಬಳಿಕ ಸಾಕಷ್ಟು ಬದಲಾಗಿದ್ದೇನೆ. ರಸ್ತೆ ಅಪಘಾತ ಎಂದು ವರದಿ ಬರೆದಿದ್ದರಿಂದ ಮನಸ್ಸಿಗೆ ತುಂಬಾ ಅಘಾತವಾಗಿದೆ. ಅದರಲ್ಲೂ 87 ವರ್ಷದ ಅಜ್ಜಿ ತೀವ್ರ ಗಾಯಗೊಂಡಿದ್ದು ತಿಳಿದು ಮಾನಸಿಕವಾಗಿ ನೊಂದಿದ್ದೇನೆ ಎಂದರು.
ಕಾರು ಅಪಘಾತ ಆಗಿರುವುದು ನಿಜ. ಹಾಗಂತ ಯಾರು ಅಪಘಾತ ಮಾಡುವುದಿಲ್ಲವೇ? ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ಅಪಘಾತ ಆಗಿರೋದಾ? ಎಂದು ಪ್ರಶ್ನಿಸಿದರು. ದಯವಿಟ್ಟು ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಎಂದು ಭಾವನಾತ್ಮಕವಾಗಿ ಕೈಮುಗಿದು ಮನವಿ ಮಾಡಿದರು.
ಘಟನೆಗೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫೆಬ್ರವರಿ 9ರಂದು ಬೆಂಟ್ಲಿ ಕಾರ್ನಲ್ಲಿದ್ದ ನಲಪಾಡ್ ಮೇಖ್ರಿ ವೃತ್ತದಲ್ಲಿ ನಡೆದ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಆಧರಿಸಿ ನಲಪಾಡ್ ಅವರಿಗೆ ನೋಟಿಸ್ ನೀಡಲಾಗಿತ್ತು. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದರು. ಪೊಲೀಸರು ಫೆಬ್ರವರಿ 11ರಂದು ವಿಚಾರಣೆ ಹಾಜರಾಗುವಂತೆ ನಲಪಾಡ್ಗೆ ಪೊಲೀಸರು ನೋಟಿಸ್ ಕೊಟ್ಟಿದ್ದರು. ಈ ಹಿನ್ನೆಲೆ ನಲಪಾಡ್ ಐಓ ನಾಗರಾಜ್ ಮುಂದೆ ಹಾಜರಾದರು.