ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕರ ಆಯ್ಕೆ ಸೇರಿದಂತೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲು ಸೆಪ್ಟೆಂಬರ್ 12ರಂದು ದೆಹಲಿಗೆ ತೆರಳುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಯೇ ಪ್ರತಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದಾಗಿದೆ. ಇದೇ ನಿಟ್ಟಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ರಾಜ್ಯದ ಪೊಲೀಸರೂ ಎಲ್ಲ ತನಿಖೆಗೂ ಸಮರ್ಥರಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣವೇ ಇದಕ್ಕೆ ಸಾಕ್ಷಿ. ವಿನಯ್ ಕುಲಕರ್ಣಿ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಸಿಬಿಐಗೆ ವಹಿಸಿರುವ ಕಾರಣ ಏನು ಎಂದು ಪ್ರಶ್ನೆ ಮಾಡಿದರು. ರಾಜ್ಯದ ಪೊಲೀಸರು ಪ್ರಕರಣವನ್ನ ಸಮರ್ಥ ರೀತಿಯಲ್ಲಿ ನಿಭಾಯಿಸಲು ಆ ಕೇಸ್ ಸಿಬಿಐಗೆ ನೀಡಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂ ಭೇಟಿಗೆ ಹಿಂದೇಟು ಏಕೆ?: ಎರಡು ಕಾರಣಕ್ಕೆ ಸಿಎಂ ಭೇಟಿಗೆ ಹಿಂದೇಟು ಹಾಕಿದೆವು. ಅವರ ಸೇಡಿನ ರಾಜಕಾರಣ, ಮತ್ತೊಂದು ಮುಖ್ಯಮಂತ್ರಿ ನಮ್ಮನ್ನ ಕರೆದು ಮಾತನಾಡಿಸಬೇಕಿತ್ತು. ಆದ್ದರಿಂದ ರಾಜ್ಯದ ಬರ ಹಾಗೂ ನೆರೆ ಪರಿಸ್ಥಿತಿ ಕುರಿತು ಅಧ್ಯಯನ ಮಾಡಿರುವ ವರದಿಯನ್ನು ಸಿಎಂಗೆ ನೀಡದಿರುವುದಕ್ಕೆ ಹಿಂದೇಟು ಹಾಕಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದುಬಾರಿ ದಂಡ ಸರಿಯಲ್ಲ: ನೂತನ ಸಾರಿಗೆ ನಿಯಮದಿಂದಾಗಿ ಇಷ್ಟೊಂದು ದಂಡ ವಿಧಿಸಿದರೆ ಸಾಮಾನ್ಯ ಜನರು, ರೈತರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಬಡವರು ಜೀವನ ಸಾಗಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಬಿಜೆಪಿ ಮೂವರು ನಾಯಕರು ಅಸಂಬದ್ಧ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿರುವ ಅನರ್ಹ ಶಾಸಕರನ್ನು ಶಾಸಕ ರೇಣುಕಾಚಾರ್ಯ ಸ್ವಾತಂತ್ರ ಹೋರಾಟಗಾರರಿಗೆ ಹೋಲಿಸಿದ್ದಾರೆ. ಸಚಿವ ಮಾಧುಸ್ವಾಮಿ ಅವರು ನೀಲಿ ಚಿತ್ರ ವೀಕ್ಷಣೆ ತಪ್ಪಲ್ಲ ಎಂದಿದ್ದಾರೆ. ಸಚಿವ ನಾಗೇಶ್ ಅವರು ಮದ್ಯವನ್ನು ಮನೆಗೇ ತಲುಪಿಸುತ್ತೇವೆಂದು ಹೇಳಿದ್ದಾರೆ ಎಂದು ಹೇಳಿದರು.
ಅಲ್ಲದೆ, ಇಂಥವರೇ ವಿಧಾನಸೌಧಕ್ಕೆ ಬರಬೇಕು ಎನ್ನುವ ನಿರ್ಧಾರ ಕೈಗೊಳ್ಳುವ ಸೂಚನೆ ಸಿಎಂ ಕಚೇರಿಯಿಂದ ಹೊರಬಿದ್ದಿದೆ. ಈ ರೀತಿ ನಿರ್ಬಂಧ ಹೇರುವುದು ಸರಿಯಲ್ಲ. ಈ ಎಲ್ಲ ಉದಾಹರಣೆಗಳು ಬಿಜೆಪಿ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದರು.