ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನನ್ನದೇನೂ ತಪ್ಪಿರಲಿಲ್ಲ. ಕೊನೆಗೆ ನನ್ನನ್ನೇ ಖಳನಾಯಕನನ್ನಾಗಿ ದೂಷಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
'ಲಿಂಗಾಯತ ಧರ್ಮವನ್ನು ಸ್ವತಂತ್ರಧರ್ಮ ಎಂದು ಘೋಷಿಸುವಂತೆ ಮಾತೆ ಮಹಾದೇವಿ ಅವರು ಮನವಿ ಮಾಡಿದ್ದರು. ಎಲ್ಲರೂ ಒಟ್ಟಾಗಿ ಬರುವಂತೆ ಅವರಿಗೆ ಸೂಚಿಸಿದ್ದೆ. ಅವರು ಒಟ್ಟಿಗೆ ಬಾರದ ಕಾರಣ ಸಮಿತಿಯನ್ನೂ ರಚಿಸಿದೆ. ಸಮಿತಿ ನೀಡಿದ ಮಾಹಿತಿಯಂತೆ ಸಚಿವ ಸಂಪುಟದಲ್ಲಿ ನಿರ್ಧಾರ ಪಡೆದು ಸ್ವಲ್ಪ ಬದಲಾಯಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೆವು. ಅವರೇ ಬಂದು ಹಾಗೆ, ಹೀಗೆ ಮಾಡಿ ಎಂದರು. ಕೊನೆಗೆ ನನಗೆ ಈ ರೀತಿ ಹಣೆಪಟ್ಟಿ ಕಟ್ಟಿದರು' ಎಂದು ವಿವರಿಸಿದರು.
ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡಿದ್ದೇ ಸಂವಿಧಾನ ಬಾಹಿರ. ಬಿಜೆಪಿಯವರು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಸದ್ಯ 221 ಸದಸ್ಯರಿದ್ದಾರೆ. ಬಿಜೆಪಿ ಬಳಿ ಇರುವುದು 105. ಅವರಿಗೆ ಸಿಂಪಲ್ ಮೆಜಾರಿಟಿ 111 ಎಲ್ಲಿದೆ? ರಾಜ್ಯಪಾಲರಿಗೆ 111 ಜನರ ಪಟ್ಟಿ ಎಲ್ಲಿ ಕೊಟ್ಟಿದ್ದಾರೆ? ಅತೃಪ್ತರ ಹೆಸರನ್ನು ಕೊಡಲು ಸಾಧ್ಯವಿಲ್ಲ. ಇದು ಸಂವಿಧಾನಬದ್ಧವಾಗಿ ರಚನೆಯಾದ ಸರ್ಕಾರವಲ್ಲ. ಇದಕ್ಕೆ ಸಂವಿಧಾನ ಚೌಕಟ್ಟಿನಲ್ಲಿ ಮಾನ್ಯತೆಯಿಲ್ಲ. ಹೀಗಿದ್ದಾಗ ಹೇಗೆ ವಿಶ್ವಾಸ ಮತಯಾಚನೆ ಮಾಡ್ತಾರೆ? ಎಂದು ಪ್ರಶ್ನಿಸಿದರು.
ಅತೃಪ್ತರು ಕಾಲ್ ಮಾಡಿದ್ದು ನಿಜ: ಸ್ಪೀಕರ್ ಮೂವರನ್ನು ಅನರ್ಹ ಮಾಡಿದ ಬಳಿಕ ಕೆಲವು ಅತೃಪ್ತರು ಕಾಲ್ ಮಾಡಿದ್ದು ನಿಜ. ಬೇಕಾಗಿಯೇ ಅವರ ಕರೆ ಸ್ವೀಕರಿಸಿಲ್ಲ. ಅದಕ್ಕೆ ಪ್ರಾಮುಖ್ಯತೆ ಕೊಡುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಜಿ.ಟಿ.ದೇವೇಗೌಡರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆ ವಿಚಾರ ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ ಎಂದು ಉತ್ತರಿಸಿದರು.