ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಡಿಸೆಂಬರ್ 3ರಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿ ಇರಲಿದೆ. ಡಿಸೆಂಬರ್ 3ರಂದು ಸಂಜೆ 6ಗಂಟೆಯಿಂದ ಡಿಸೆಂಬರ್ 6ರ ಸಂಜೆ 6 ಗಂಟೆಯ ತನಕ ನಿಷೇಧಾಜ್ಞೆ ಅನ್ವಯವಾಗಲಿದೆ. ಮತದಾನ ಮುಗಿದ ಮುಂದಿನ ದಿನವೂ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ.
ಮತಗಟ್ಟೆ ಬಳಿ ಐದಕ್ಕಿಂತ ಮೇಲ್ಪಟ್ಟು ಗುಂಪು ಸೇರುವಂತಿಲ್ಲ. ರಾಜಕೀಯ ಪಕ್ಷ ಹಾಗೂ ಧಾರ್ಮಿಕ ಪಂಗಡಗಳ ಮೆರವಣಿಗೆ ನಿಷೇಧಿಸಲಾಗಿದೆ. ಮತದಾನದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಮನೆಮೆನೆಗೆ ತೆರಳಿ ಪ್ರಚಾರ ಕೈಗೊಳ್ಳಬಹುದು. ಅದಾದ ಬಳಿಕ ಪ್ರಚಾರ ಮಾಡುವಂತಿಲ್ಲ ಎಂದು ಆದೇಶದಲ್ಲಿ ಆಯುಕ್ತರು ತಿಳಿಸಿದ್ದಾರೆ.