ಬೆಂಗಳೂರು: ಮಲ್ಲೇಶ್ವರಂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಧ್ವಜಾರೋಹಣ ನೆರವೇರಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಹಿಂದುಳಿದ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಮತ್ತಿತರರು ಭಾಗಿಯಾಗಿದ್ದರು.
ನಂತರ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್, ದಲಿತ ಶಾಸಕನ ಮೇಲೆ ಹಲ್ಲೆಯಾಗಿದೆ. ಆದರೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಬಲಕ್ಕೆ ಬರಲಿಲ್ಲ. ಅವರು ಈವರೆಗೂ ಘಟನೆ ಕುರಿತು ಮಾತನಾಡಿಲ್ಲ. ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ಗೆ ಕೇವಲ ವೋಟ್ ಬ್ಯಾಂಕ್ ಆಗಿದ್ದಾರೆ. ಘಟನೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ದಾಳಿಕೋರ ಸಂಘಟನೆ ಎಸ್ಡಿಪಿಐ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ರವಿ ಕುಮಾರ್ ಮಾತನಾಡಿ, ಸರ್ಕಾರ ಉಕ್ಕಿನ ಕೈಗಳನ್ನು ಬಳಸಬೇಕು. ಎಸ್ಡಿಪಿಐ ಹಾಗೂ ಕೆಎಫ್ಡಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ದಾಳಿಕೋರರಿಂದಲೇ ಉಂಟಾದ ನಷ್ಟವನ್ನು ವಸೂಲಿ ಮಾಡಬೇಕು ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ನಾವು ಯಾರ ಓಲೈಕೆ ರಾಜಕಾರಣ ಮಾಡುವುದಿಲ್ಲ. ನಮಗೆ ರಾಷ್ಟ್ರ ಮೊದಲು, ಆಮೇಲೆ ಪಕ್ಷ. ದಾಳಿಕೋರರ ಪರವಾಗಿ ಕಾಂಗ್ರೆಸ್ ಮಾತನಾಡುತ್ತಿದೆ. ಎಸ್ಡಿಪಿಐ ಸಂಘಟನೆ ವಿರುದ್ಧ ರಾಜ್ಯದಲ್ಲಿ 24 ಅಪರಾಧ ಪ್ರಕರಣಗಳಿವೆ. ಹೀಗಾಗಿ ಸಂಘಟನೆಯನ್ನು ನಿಷೇಧ ಮಾಡುವಂತೆ ಒತ್ತಾಯಿಸಿದರು.