ದೊಡ್ಡಬಳ್ಳಾಪುರ: ರೈತ ಕೂಡ ಒಬ್ಬ ವಿಜ್ಞಾನಿ. ಕೃಷಿ ಚಟುವಟಿಕೆ ಮತ್ತು ಪಂಶುಸಂಗೋಪನೆಯಲ್ಲಿ ಸದಾ ನವೀನ ಅವಿಷ್ಕಾರಗಳನ್ನು ಆತ ಕಂಡು ಹಿಡಿಯುತ್ತಾನೆ. ಇಂತಹ ಆವಿಷ್ಕಾರಕ್ಕೆ ಮತ್ತಷ್ಟು ತರಬೇತಿ ಕೊಟ್ಟು, ರೈತರನ್ನು ಪರಿಣತರನ್ನಾಗಿ ಮಾಡುವ ಕೆಲಸವನ್ನು ರಾಷ್ಟ್ರೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಂಸ್ಥೆ ಮಾಡುತ್ತಿದೆ.
ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ (ನಿವೇದಿ) ನಾವಿಕ್ ಕೇಂದ್ರವು ಕೃಷಿ ಮಂತ್ರಾಲಯದ RKVY-RAFTAR ಯೋಜನೆಯಡಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ನಿಯೋ ಮತ್ತು ನೆಸ್ಟ್ ಪರಿಕಲ್ಪನೆಯಲ್ಲಿ ರೈತರನ್ನು ಉದ್ಯೋಗಿಗಳನ್ನಾಗಿ ಮಾಡುವ ಕೆಲಸವಾಗುತ್ತಿದೆ. ನಿಯೋ ಅಡಿಯಲ್ಲಿ ರೈತರು ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಪಟ್ಟ ಆವಿಷ್ಕಾರ ಮಾಡಿದ್ದರೆ, ಅಂತಹ ರೈತರಿಗೆ ಕೃಷಿ ವಿಜ್ಞಾನಿಗಳಿಂದ ತರಬೇತಿ ಕೊಟ್ಟು ರೈತನ ಆವಿಷ್ಕಾರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು. ಹಾಗೆಯೇ ನೆಸ್ಟ್ ಅಡಿಯಲ್ಲಿ ಈಗಾಗಲೇ ಕಂಡು ಹಿಡಿದಿರುವ ತಂತ್ರಜ್ಞಾನಕ್ಕೆ ಮಾರುಕಟ್ಟೆ ಒದಗಿಸುವ ಬಗ್ಗೆ ತರಬೇತಿ ಕೊಡಲಾಗುತ್ತಿದೆ.
ಕೃಷಿ, ಪಶುಸಂಗೋಪನೆ ಮತ್ತು ಮತ್ಸ್ಯಪಾಲನೆ ಹೀಗೆ ಹಲವು ಕ್ಷೇತ್ರಗಳಲ್ಲಿ 25 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ನಿವೇದಿ ಸಂಸ್ಥೆಯಲ್ಲಿ 2 ತಿಂಗಳು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು. ಇಲ್ಲಿ ಕಲಿತ ಜ್ಞಾನದಿಂದ ತಮ್ಮ ಆವಿಷ್ಕಾರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ತಮ್ಮ ಆವಿಷ್ಕಾರ ತಂತ್ರಜ್ಞಾನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭಗಳಿಸುವ ಬಗ್ಗೆ ತಿಳಿದುಕೊಳ್ಳಲಿದ್ದಾರೆ.