ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಕಳೆದ 9 ತಿಂಗಳಿಂದ ಶಿಕ್ಷಣ ಕೇತ್ರ ಸಂಪೂರ್ಣ ಬಂದ್ ಆಗಿದ್ದು, ಇದೀಗ ರಾಜ್ಯ ಸರ್ಕಾರ ಜನವರಿ 1 ರಿಂದ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲು ಆದೇಶ ನೀಡಿರುವ ಹಿನ್ನೆಲೆ ಇಂದಿನಿಂದ ಎಸ್ಎಸ್ಎಲ್ಸಿ, ಪಿಯು ತರಗತಿಗಳು ಆರಂಭವಾಗಲಿವೆ.
ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಶಾಲಾ - ಕಾಲೇಜು ಆರಂಭವಾಗಲಿದ್ದು, ತರಗತಿಗಳನ್ನು ನಡೆಸಲು ಶಿಕ್ಷಕರು ಸಜ್ಜಾಗಿದ್ದಾರೆ. ಸುಮಾರು 9 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿರುವುದರಿಂದ ಚಾಮರಾಜಪೇಟೆಯ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ರಂಗೋಲಿ ಹಾಕಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳು ಶಾಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೇಗೆ ಅಧ್ಯಯನ ನಡೆಸಬೇಕು, ಶಾಲೆ ಆರಂಭಕ್ಕೂ ಮುನ್ನ ಕೈಗೊಳ್ಳಬೇಕಾದ ಸ್ವಚ್ಛತಾ ಕ್ರಮ, ಸೋಂಕಿನ ಲಕ್ಷಣವಿರುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಮತ್ತು ತರಗತಿ ಕೊಠಡಿಗಳಲ್ಲಿ ಗರಿಷ್ಠ 15-20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿ ಈಗಾಗಲೇ ಸೂಚನೆ ಹೊರಡಿಸಲಾಗಿದೆ.
ಇನ್ನು ಬಿಬಿಎಂಪಿ ಪಾಲಿಕೆ ಅಧೀನದಲ್ಲಿ 15 ಪಿಯು ಕಾಲೇಜುಗಳಿದ್ದು, 2070 ವಿದ್ಯಾರ್ಥಿಗಳಿದ್ದಾರೆ. 32 ಪ್ರೌಢಶಾಲೆಗಳಿದ್ದು, 10ನೇ ತರಗತಿ ವಿದ್ಯಾರ್ಥಿಗಳು 2,190 ಇದ್ದಾರೆ. ಈಗಾಗಲೇ ವಿದ್ಯಾಗಮ ಯೋಜನೆ ಹಾಗೂ ಆನ್ಲೈನ್ ಮೂಲಕ ತರಗತಿ ನಡೆಸಲಾಗುತ್ತಿದೆ. ಆದರೆ, ಬಿಬಿಎಂಪಿ ಪಾಲಿಕೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಶಿಕ್ಷಣ ನೀಡಲು ಪಾಲಿಕೆ ಶಿಕ್ಷಣ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಪಠ್ಯಗಳಲ್ಲಿ ಅತಿಮುಖ್ಯವಾದ ಅಂಶಗಳ ಪ್ರಶ್ನೋತ್ತರಗಳನ್ನು ಹೊಂದಿರುವ ನೋಟ್ಸ್ ಅನ್ನು ಶಿಕ್ಷಕರೇ ತಯಾರು ಮಾಡಿ ವಿದ್ಯಾರ್ಥಿಗಳಿಗೆ ಅದನ್ನು ನೀಡಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದಾಗಿ ಶಾಲೆಯಿಂದ ದೂರ ಉಳಿದಿರುವ, ಆನ್ಲೈನ್ ಶಿಕ್ಷಣ ಅರ್ಥವಾಗದಿರುವ ಮಕ್ಕಳಿಗೆ ಓದಲು ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.