ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಕೊಡುವ ವಿದ್ಯಾರ್ಥಿ ವೇತನವನ್ನು ಈ ತಿಂಗಳ ಅಂತ್ಯದೊಳಗೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ರಿಜ್ವಾನ್ ಹರ್ಷದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಶೇ.86 ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಮೆಟ್ರಿಕ್ ನಂತರ ಮೂರೂವರೆ ಲಕ್ಷ, ಮೆಟ್ರಿಕ್ ಪೂರ್ವದಲ್ಲಿ 10 ಲಕ್ಷ ಒಟ್ಟು 13 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಪೈಕಿ 10 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡಗಡೆಯಾಗಿದೆ ಎಂದು ಹೇಳಿದರು.
ಕೆಲವು ತಾಂತ್ರಿಕ ಕಾರಣಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ವಿಳಂಬವಾಗಿದೆ. ಈ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಇಲಾಖೆಯಿಂದ ಅಭಿಯಾನವನ್ನೇ ಹಮ್ಮಿಕೊಳ್ಳಲಾಗಿತ್ತು.
ಕೆಲವರಿಗೆ ಆಧಾರ್ ಕಾರ್ಡ್ ಇರಲಿಲ್ಲ. ಕೆಲವರಿಗೆ ಬ್ಯಾಂಕ್ ಖಾತೆ ಇರಲಿಲ್ಲ. ಕೆಲವೆಡೆ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಅಭಿಯಾನ ಮಾಡಿದ್ದೆವು. ಈ ತಿಂಗಳೊಳಗೆ ಎಲ್ಲರಿಗೂ ವಿದ್ಯಾರ್ಥಿ ವೇತನ ತಲುಪಲಿದೆ ಎಂದರು.
13 ಸಾವಿರ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ವಿವಿಧ ಕೋರ್ಸ್‌ಗಳಿಗೆ ಸೇರ್ಪಡೆಯಾಗಿದ್ದಾರೆ. ಇವರಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕಟ್ಟ ಕಡೆಯ ವಿದ್ಯಾರ್ಥಿಗೂ ಈ ತಿಂಗಳೊಳಗೆ ವಿದ್ಯಾರ್ಥಿ ವೇತನ ಸಿಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ..ನಿಗದಿತ ಅವಧಿಗೂ ಒಂದು ದಿನ ಮೊದಲೇ ಮುಗಿದ ಸಂಸತ್ ಚಳಿಗಾಲದ ಅಧಿವೇಶನ
ಇದಕ್ಕೂ ಮೊದಲು ಮಾತನಾಡಿದ್ದ ಮಾಜಿ ಸಚಿವ ಡಾ. ಜಿ. ಪರಮೇಶ್ವರ್, ನೀವು ವಿದ್ಯಾರ್ಥಿ ವೇತನವನ್ನು ಸಕಾಲಕ್ಕೆ ನೀಡದೇ ಇದ್ದರೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಊಟ ಹಾಕುವುದಿಲ್ಲ. ಕಳೆದ 2 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ಹೀಗಾದರೆ ಹೇಗೆ, ಕೂಡಲೇ ಎಲ್ಲರಿಗೂ ವಿದ್ಯಾರ್ಥಿ ವೇತನ ನೀಡಿ ಎಂದು ಒತ್ತಾಯಿಸಿದ್ದರು.
ಇದಕ್ಕೆ ದನಿಗೂಡಿಸಿದ ಸದಸ್ಯ ಮಹೇಶ್ ಅವರು, ಮೊದಲು ವಿದ್ಯಾರ್ಥಿ ವೇತನಕ್ಕೆ ಕಾಲೇಜುಗಳೇ ಮಾಹಿತಿಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಈಗ ವಿದ್ಯಾರ್ಥಿಗಳೇ ಅಪ್ಲೋಡ್ ಮಾಡಬೇಕಿದೆ. ಇದನ್ನು ತಪ್ಪಿಸಿ. ಇದರಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು.
ಎಲ್ಲ ಸಮಸ್ಯೆಗಳನ್ನು ಗಮನಿಸಿದ್ದೇವೆ. ಯಾವುದೇ ರಾಜಿ ಇಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೊದಲೆ ಭದ್ರತಾ ಪತ್ರ ನೀಡಲಾಗುತ್ತಿದೆ. ಯಾವುದೇ ಕಾಲೇಜು ಪರೀಕ್ಷೆ ಕೂರಿಸುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಹೇಳುವಂತಿಲ್ಲ. ಹಾಗೆ ಹೇಳಿದರೆ ಆ ಕಾಲೇಜುಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡುವುದಾಗಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.