ಬೆಂಗಳೂರು: ರಾಜ್ಯದಲ್ಲಿರುವ ಎರಡೂವರೆ ಲಕ್ಷ ಎಕರೆ ಬಂಜರು ಭೂಮಿಯನ್ನು ಪುನಶ್ಚೇತನ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದರು. ಪರಿಸರ ಉಳಿಸಲು ಸರ್ಕಾರದಿಂದ 100 ಕೋಟಿ ಮೊತ್ತದ ಎಕಾಲಾಜಿಕಲ್ ಬಜೆಟ್ ಮಂಡನೆ ಮಾಡಿದ್ದೇವೆ. ಎಲ್ಲೆಲ್ಲಿ ಅರಣ್ಯ ನಾಶ ಆಗಿದೆಯೋ, ಬಂಜರು ಭೂಮಿ ಇದೆಯೋ ಅದನ್ನ ಪುನಶ್ಚೇತನ ಮಾಡ್ತೇವೆ. ಈ ತರಹದ ಬಜೆಟ್ ದೇಶದಲ್ಲೇ ಮೊದಲಾಗಿದೆ. ರಾಜ್ಯದ ಅರಣ್ಯ ಪ್ರದೇಶ ಶೇ.24 ರಷ್ಟು ಇದ್ದು, ಅದನ್ನು ಶೇ.30ಕ್ಕೆ ಹೆಚ್ಚಿಸುತ್ತೇವೆ ಎಂದರು.
ಇಶಾ ಪ್ರತಿಷ್ಠಾನದ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಸಿಎಂ ಮಾತನಾಡಿದರು. ಯಾವ ಯಾವುದೋ ಸಮಾವೇಶ ಮಾಡ್ತೇವೆ. ಆದರೆ ನಮ್ಮ ಅಸ್ತಿತ್ವ, ಭವಿಷ್ಯಕ್ಕೆ ಕಾರಣವಾಗಿರುವ ಮಣ್ಣು ಉಳಿಸಿ ಸಮಾವೇಶ ಅಗತ್ಯವಿತ್ತು. ಪಂಚಭೂತಗಳಲ್ಲಿ ಶ್ರೇಷ್ಠವಾದದ್ದು ಮಣ್ಣು. ಮಣ್ಣಿನಲ್ಲಿ ಎಲ್ಲ ಪಂಚಭೂತಗಳೂ ಅಡಕವಾಗಿವೆ.
2008 ರಲ್ಲಿ ಯಡಿಯೂರಪ್ಪ ಭೂಚೇತನ ಕಾರ್ಯಕ್ರಮ ತಂದ್ರು. ಭೂಚೇತನ ಮಣ್ಣಿನಲ್ಲಿರುವ ಸತ್ವ, ಸಾರ ಉಳಿಸುವ ಯೋಜನೆಯಾಗಿದೆ. ಮಣ್ಣಿನಲ್ಲಿ ನೈಸರ್ಗಿಕ ಸತ್ವ, ಸಾರ ಕಮ್ಮಿ ಇದ್ದರೆ ಅದನ್ನು ಸರಿದೂಗಿಸುವ ಕಾರ್ಯಕ್ರಮ ಇದು. ಮಣ್ಣು ಉಳಿಸಿ ಪರಿಕಲ್ಪನೆಯನ್ನು ದೂರದೃಷ್ಟಿಯಿಂದ ಅಂದೇ ಯಡಿಯೂರಪ್ಪ ಪರಿಚಯಿಸಿದರು. ಮಣ್ಣು ಉಳಿಸಿ ಅಭಿಯಾನ ಐತಿಹಾಸಿಕ ಮಹತ್ವದ್ದು. ಜಗತ್ತಿನ ಇತಿಹಾಸದ ಪುಟಗಳಲ್ಲಿ ಈ ಅಭಿಯಾನ ದಾಖಲೆ ಆಗಲಿದೆ ಎಂದು ತಿಳಿಸಿದರು.
ಈ ಅಭಿಯಾನ ಯಶಸ್ವಿ ಆಗಿದೆ, ಮುಂದೆಯೂ ಯಶಸ್ವಿಯಾಗಲಿದೆ. ಹುಟ್ಟುವ ಮಗುವಿಗೂ ಈ ಅಭಿಯಾನ ಅವಶ್ಯಕತೆ ಇದೆ. ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ಸರ್ಕಾರದ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಇಂಥ ಅಭಿಯಾನಸ ಅಗತ್ಯ ಇದೆ: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇಶಾ ಫೌಂಡೇಷನ್ ವತಿಯಿಂದ ಮಣ್ಣು ಉಳಿಸಿ ಅಭಿಯಾನ ಅಗತ್ಯವಾಗಿದೆ. 21ನೇ ಶತಮಾನದಲ್ಲಿ ನಾವು ಅತ್ಯಂತ ಕಳವಳದಿಂದ ಜೀವನ ನಡೆಸುತ್ತಿದ್ದೇವೆ. ಪ್ರಪಂಚದಾದ್ಯಂತ ಪ್ರವಾಹ, ಅತಿವೃಷ್ಟಿ ಪರಿಸರ ಅಸಮತೋಲನ ಹೆಚ್ಚಾಗ್ತಿದೆ.
ನಾಗರಿಕತೆ ಹೆಚ್ಚಾಗ್ತಿದೆ, ಉಸಿರಾಟಕ್ಕೆ ಶುದ್ಧ ಗಾಳಿ, ನೀರು ಸಿಕ್ತಿಲ್ಲ. ಗಾಳಿ, ನೀರಿಗೆ ಪರಿತಪಿಸುವ ಸನ್ನಿವೇಶ ಇದೆ. ರಾಜರು ಸಾಮ್ರಾಜ್ಯಗಳಿಗೆ ಹೋರಾಡಿದ್ರು. ಪೆಟ್ರೋಲ್, ಡೀಸೆಲ್, ನೀರಿಗಾಗಿ ಈಗ ಹೋರಾಟ ನಡೀತಿದೆ. ಇಂಥ ಸಂದರ್ಭದಲ್ಲಿ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನ ಅವಶ್ಯಕತೆ ಇದೆ, ಸಮಯೋಚಿತವಾಗಿದೆ. ಈ ಅಭಿಯಾನಕ್ಕೆ ಎಲ್ರೂ ಕೈಜೋಡಿಸಿ ಮಣ್ಣು ಉಳಿಸುವ ಕಾರ್ಯದಲ್ಲಿ ತೊಡಗಬೇಕಿದೆ ಎಂದು ಕರೆ ನೀಡಿದರು.
ತಿಳಿವಳಿಕಾ ಪತ್ರಕ್ಕೆ ಸಹಿ: ಮಣ್ಣು ಉಳಿಸುವ ಅಭಿಯಾನಕ್ಕಾಗಿ ಇಶಾ ಫೌಂಡೇಶನ್ ಜೊತೆ ರಾಜ್ಯ ಸರ್ಕಾರ ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಲಾಯಿತು. ಒಪ್ಪಂದಕ್ಕೆ ಸಿಎಂ ಬೊಮ್ಮಾಯಿ ಹಾಗೂ ಸದ್ಗುರು ಸಹಿ ಹಾಕಿದರು. ಇದೇ ವೇಳೆ, ಸದ್ಗುರು ಮಣ್ಣು ಪುನಶ್ಚೇತನ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಈ ಕಿರು ಹೊತ್ತಿಗೆ ಮಣ್ಣು ಉಳಿಸುವ ಹಾಗೂ ಪುನಶ್ಚೇತನಗೊಳಿಸುವ ಮಾರ್ಗಸೂಚಿಯನ್ನು ಹೊಂದಿದೆ.
(ಇದನ್ನೂ ಓದಿ: ಇಂದು ಬೆಂಗಳೂರಿಗೆ ಮೋದಿ... ಕಾರ್ಯಕ್ರಮಗಳ ಡಿಟೇಲ್ಸ್... ಶಿಕ್ಷಣ ಸಂಸ್ಥೆಗಳಿಗೆ ರಜೆ)