ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ಸರ್ಕಾರಿ ಶಾಲಾ ಮಕ್ಕಳಿಂದ ಉಪಗ್ರಹ ತಯಾರಿ ಕೆಲಸ ನಡೆಯಲಿದ್ದು, ಈ ಉಪಗ್ರಹಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದೆ ಎಂದು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶ್ವಥ್ ನಾರಾಯಣ ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಉಪಗ್ರಹ ತಯಾರಿ ಮಾಡಲು ನಿಶ್ಚಯವಾಗಿದ್ದು, ಇದನ್ನು ಸೆಪ್ಟೆಂಬರ್ - ಅಕ್ಟೋಬರ್ ಒಳಗೆ ಲಾಂಚ್ ಮಾಡಲು ಎಲ್ಲ ತಯಾರಿ ನಡೆದಿದೆ. ಇದಕ್ಕಾಗಿ 1 ಕೋಟಿ 90 ಲಕ್ಷ ರೂ. ವೆಚ್ಚ ತಗುಲಿದೆ. ಸಾಮಾನ್ಯವಾಗಿ ಸ್ಯಾಟಲೈಟ್ ಮುಂಚೆ ಮಾಡಲು 50-60 ಕೋಟಿ ಆಗ್ತಿತ್ತು. ಹಾಗೇ 60 ಕೆಜಿ ತೂಕ ಇರ್ತಿತ್ತು. ಆದರೆ ಈಗ ಸರಳಗೊಳಿಸಿ ಒಂದೂವರೆ ಕೆಜಿ ತೂಕದಲ್ಲಿ ನಿರ್ಮಾಣ ಮಾಡಲಾಗ್ತಿದೆ ಎಂದು ಸಚಿವರು ವಿವರಿಸಿದರು.
ವಿಜ್ಞಾನ-ತಂತ್ರಜ್ಞಾನದಲ್ಲಿ ಆಸಕ್ತಿ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ ಈ ಯೋಜನೆಗೆ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದೇಶದಲ್ಲೇ ಮೊದಲ ಬಾರಿ ಸರ್ಕಾರಿ ಶಾಲಾ ಮಕ್ಕಳಿಂದ ಉಪಗ್ರಹ ತಯಾರಿ ಕೆಲಸ ನಡೆಯಲಿದೆ. ಮಕ್ಕಳಿಗೆ ಪುನೀತ್ ಅಂದರೆ ಇಷ್ಟ ಹೀಗಾಗಿ ಪುನೀತ್ ಹೆಸರು ಇಡಲಾಗಿದೆ ಎಂದು ಹೇಳಿದರು.
ಇನ್ನು ಉಕ್ರೇನ್ ನಿಮದ ಬಂದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ, ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ. ಕೇಂದ್ರ ಸರ್ಕಾರದ ಜೊತೆ ಮಾತಾಡಬೇಕಾಗುತ್ತೆ. ಯಾಕೆಂದರೆ ಬೇರೆ ಕೋರ್ಸ್ಗೆ ಸಮಸ್ಯೆ ಆಗೊಲ್ಲ. ಆದರೆ ಮೆಡಿಕಲ್ ಕೋರ್ಸ್ ಗಳು ಮಾಡೋದು ಕಷ್ಟ. ಅದರ ನಿಯಮಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಹಾಗೆ ನೋಡಿಕೊಳ್ತೀವಿ ಎಂದರು.
ಮಾಜಿ ಸಚಿವ ಸದಾನಂದ ಗೌಡ ಮಾತನಾಡಿ, ಭಾರತದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಯುವಜನತೆಯನ್ನು ತಯಾರು ಮಾಡುವ ಅವಶ್ಯಕತೆ ಇದೆ. ನಮಗೆ ಗೊತ್ತಿಲ್ಲದ ನೂರಾರು ಸಂಗತಿಯನ್ನು ವಿದ್ಯಾರ್ಥಿಗಳು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ನಮ್ಮ ರಾಜ್ಯ ಹೆಚ್ಚು ಹೆಸರು ಮಾಡ್ತಿದೆ, ಇದು ಮತ್ತಷ್ಟು ಹೆಚ್ಚಾಗಲಿ ಎಂದು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ವಾರದ ಬಳಿಕ ಶಾಲಾ-ಕಾಲೇಜು ಪುನಾರಂಭ
ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಅಯ್ಯಪ್ಪನ್, ಕೆಸ್ಟೆಪ್ಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.