ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ನೀವು ಸ್ಪಷ್ಟವಾಗಿ ಸತ್ಯವನ್ನು ಮರೆಮಾಚುತ್ತಿದ್ದೀರಿ. ಕರ್ನಾಟಕ ರಾಜ್ಯವು ಭ್ರಷ್ಟಾಚಾರದ ರಾಜಧಾನಿ ಆಗುತ್ತಿದೆ. ಮುಖ್ಯಮಂತ್ರಿಯಾಗಲಿ, ಪ್ರಧಾನಿಯಾಗಲಿ ಏನು ಮಾತನಾಡುತ್ತಿಲ್ಲ. ಪರೋಕ್ಷವಾಗಿ ಇದನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಮೀಷನ್ ಪಡೆದ ಆರೋಪ ಹಿನ್ನೆಲೆ ಸಚಿವ ಕೆ ಎಸ್ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಪೂರ್ವ ಪ್ರವೇಶದ್ವಾರದಲ್ಲಿ ನಿನ್ನೆಯಿಂದ ಪ್ರತಿಭಟನೆ ನಡೆಸಿದ್ದಾರೆ. ಆ ಬಳಿಕ ಮಾಧ್ಯಮಗೋಷ್ಠೀಯಲ್ಲಿ ಮಾತನಾಡಿದ ಡಿಕೆಶಿ, ಸಚಿವ ಕೆ.ಎಸ್ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಸಿಎಂ ನಿವಾಸಕ್ಕೆ ಘೇರಾವ್ ಹಾಕಲು ಹೊರಟಿದ್ದ ನಮಗೆ, ಅವಕಾಶ ನೀಡದೇ ವಶಕ್ಕೆ ಪಡೆಯಲಾಯಿತು.
ಅದರಿಂದ ಇಲ್ಲಿಗೆ ಬಂದು 15 ಶಾಸಕರ ನೇತೃತ್ವದಲ್ಲಿ 24 ಗಂಟೆಗಳ ಕಾಲ ಧರಣಿ ಆರಂಭಿಸಿ ನಿನ್ನೆ ರಾತ್ರಿ ದಿನ ಕಳೆದಿದ್ದೇವೆ. ರಾಜ್ಯದ ಜನತೆಗೆ ಈ ಮೂಲಕ ನಮ್ಮ ಹೋರಾಟದ ವಿವರ ನೀಡಿದ್ದೇವೆ ಎಂದರು. ಇದು ಕಾಂಗ್ರೆಸ್ ಪಕ್ಷದ ಅಥವಾ ನಮ್ಮ ವೈಯಕ್ತಿಕ ವಿಚಾರ ಅಲ್ಲ. ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಅರಾಜಕತೆಯ ಬಗ್ಗೆ ಜನ ನೋವಿನಿಂದ ತಿಳಿಸಿರುವ ವಿಚಾರದ ಹೋರಾಟವಾಗಿದೆ.
ರಾಜ್ಯದಲ್ಲಿ ನೋಂದಾವಣಿಯಾಗದ ಸಾಕಷ್ಟು ಮಂದಿ ಗುತ್ತಿಗೆದಾರರು ಇದ್ದಾರೆ. ಪ್ರತಿ ತಾಲೂಕಿನಲ್ಲಿ ನೂರಾರು ಮಂದಿ ಇಂತಹ ಗುತ್ತಿಗೆದಾರರು ಇದ್ದಾರೆ. 40% ಕಮಿಷನ್ ಎಲ್ಲಾ ಕಡೆ ಇದ್ದು, ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಈ ಬಗ್ಗೆ ಒಂದಿಷ್ಟು ಗಮನ ಹರಿಸಿದ್ದರೆ, ಇಂತಹ ಒಂದು ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದರು.
ಸಂತೋಷ್ ಕೆ ಪಾಟೀಲ್‌ರಂತಹ ಅಮಾಯಕರ ಸಾವು ಆಗುತ್ತಿರಲಿಲ್ಲ. ಒಬ್ಬ ಬಿಜೆಪಿ ಕಾರ್ಯಕರ್ತನ 40 ಪರ್ಸೆಂಟ್ ಕಮಿಷನ್ ಬಲಿ ಪಡೆದಿದೆ. ಒಬ್ಬ ಬಿಜೆಪಿ ಕಾರ್ಯಕರ್ತ ಈ ರೀತಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. 40 ಪರ್ಸೆಂಟ್ ಕಮಿಷನ್ ಹೊಡೆದಿದ್ದಾರೆ ಅನ್ನುವುದು ಪೊಲೀಸರು ದಾಖಲಿಸಿರುವ ಎಫ್ಐಆರ್‌ನಲ್ಲಿ ನಮೂದಾಗಿಲ್ಲ.
ಮೃತ ಸಂತೋಷ್ ತನ್ನ ವಾಟ್ಸ್‌ಆ್ಯಪ್ ಸಂದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ನೀವು ಸ್ಪಷ್ಟವಾಗಿ ಸತ್ಯವನ್ನು ಮರೆಮಾಚುತ್ತಿದ್ದೀರಿ ಎಂದು ಆರೋಪಿಸಿದರು. ನಾಳೆಯಿಂದ ರಾಜ್ಯಾದ್ಯಂತ 9 ಪ್ರತ್ಯೇಕ ತಂಡವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ.
ಇದಾದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರವಾರು ನಮ್ಮ ಹೋರಾಟ ಮುಂದುವರಿಸುತ್ತೇವೆ. ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಕಾರ್ಯ ಮಾಡುತ್ತೇವೆ. ಯಾರ್ಯಾರು ಯಾವ್ಯಾವ ಹೇಳಿಕೆಯನ್ನು ನೀಡಿದ್ದಾರೆ ಎಂಬುದಕ್ಕೆ ನಾವು ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇವೆ ಎಂದರು. ಮುಖ್ಯಮಂತ್ರಿ ಹೇಳಿಕೆಯಿಂದ ನಾವು ಯಾವುದೇ ನ್ಯಾಯವನ್ನ ನಿರೀಕ್ಷಿಸುತ್ತಿಲ್ಲ. ಯಡಿಯೂರಪ್ಪ ಸಹ ಮೂರು ತಿಂಗಳಲ್ಲಿ ಈಶ್ವರಪ್ಪ ಪ್ರಾಮಾಣಿಕರಾಗಿ ವಾಪಸ್ ಬರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಇದರಿಂದಾಗಿ ಕೇವಲ ಈಶ್ವರಪ್ಪ ರಾಜೀನಾಮೆಯಿಂದ ನಮಗೆ ನ್ಯಾಯ ಸಿಗಲಿದೆ ಎಂಬ ನಿರೀಕ್ಷೆ ಇಲ್ಲ. ನ್ಯಾಯಾಂಗ ತನಿಖೆ ಆಗಬೇಕು ಎಂಬುದೇ ನಮ್ಮ ಒತ್ತಾಯವಾಗಿದೆ ಎಂದರು. ಇದೇ ವೇಳೆ ಎಲ್ಲರಿಗೂ ಗುಡ್ ಫ್ರೈಡೇ ಶುಭಾಶಯ ಹೇಳಿದ ಡಿಕೆಶಿ, ಮಾಜಿ ಶಾಸಕ ಶ್ರೀರಾಮರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸಿದರು. ಅವರ ಅಗಲಿಕೆ ಬಾಳ ನೋವಿನ ಸಂಗತಿಯಾಗಿದೆ ಎಂದರು.